ಬಾಳೆ ಬೆಳೆಯಲ್ಲಿ ಸಿಗಟೋಕ ರೋಗ ಮತ್ತು ಅದರ ನಿರ್ವಹಣೆ
ಸಿಗಟೋಕಾ ರೋಗವು ಪ್ರಪಂಚದಾದ್ಯಂತ ಬಾಳೆ ಬೆಳೆಯುವ ಪ್ರದೇಶದಲ್ಲಿ ಕ೦ಡುಬರುವ ಅತ್ಯಂತ ಸಾಮಾನ್ಯ ಮತ್ತು ಪ್ರಮುಖ ಶಿಲೀಂಧ್ರ ರೋಗವಾಗಿದೆ. ಅದನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ಈ ರೋಗವನ್ನು 1963 ರಲ್ಲಿ ಮೊದಲ ಬಾರಿಗೆ ಫಿಜಿ ದೇಶದ ಸಿಗಟೋಕಾ ಕಣಿವೆಯಲ್ಲಿ ಕಂಡುಹಿಡಿಯಲಾಯಿತು ಮತ್ತು ರೋಗಕ್ಕೆ ಆ ಪ್ರದೇಶದ ಹೆಸರನ್ನೇ ಇಡಲಾಯಿತು.
Satish Naik
9/19/20231 min read
ಬಾಳೆ ಬೆಳೆಯಲ್ಲಿ ಸಿಗಟೋಕ ರೋಗ ಮತ್ತು ಅದರ ನಿರ್ವಹಣೆ
ಸಿಗಟೋಕಾ ರೋಗವು ಪ್ರಪಂಚದಾದ್ಯಂತ ಬಾಳೆ ಬೆಳೆಯುವ ಪ್ರದೇಶದಲ್ಲಿ ಕ೦ಡುಬರುವ ಅತ್ಯಂತ ಸಾಮಾನ್ಯ ಮತ್ತು ಪ್ರಮುಖ ಶಿಲೀಂಧ್ರ ರೋಗವಾಗಿದೆ. ಅದನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ಈ ರೋಗವನ್ನು 1963 ರಲ್ಲಿ ಮೊದಲ ಬಾರಿಗೆ ಫಿಜಿ ದೇಶದ ಸಿಗಟೋಕಾ ಕಣಿವೆಯಲ್ಲಿ ಕಂಡುಹಿಡಿಯಲಾಯಿತು ಮತ್ತು ರೋಗಕ್ಕೆ ಆ ಪ್ರದೇಶದ ಹೆಸರನ್ನೇ ಇಡಲಾಯಿತು.
ಕಪ್ಪು ಮತ್ತು ಹಳದಿ ಸಿಗಟೋಕಾ, ಇವುಗಳು ಸಿಗಟೋಕಾ ರೋಗದ ಎರಡು ವಿಧಗಳು. ಇವುಗಳು ಕ್ರಮವಾಗಿ ಮೈಕೋಸ್ಫೇರೆಲ್ಲಾ ಫಿಜಿಯೆನ್ಸಿಸ್ ಮತ್ತು ಮೈಕೋಸ್ಪಹೆರೆಲ್ಲಾ ಮ್ಯೂಸಿಕೋಲಾ ಎನ್ನುವ ಹೆಸರಿನ ಶಿಲೀಂಧ್ರ ಗಳಿಂದ ಬರುತ್ತವೆ. ಇಲ್ಲಿ ರೋಗಲಕ್ಷಣಗಳು ವಿಭಿನ್ನವಾಗಿದ್ದರೂ, ಅವುಗಳಿಗೆ ಒ೦ದೇ ರೀತಿಯ ನಿರ್ವಹಣೆಯ ಅಗತ್ಯವಿರುತ್ತದೆ.
ಸಿಗಟೋಕದ ರೋಗಲಕ್ಷಣಗಳು
ಕಪ್ಪು ಸಿಗಟೋಕಾದಲ್ಲಿ, ಕಪ್ಪು ಬಣ್ಣದ ಪಟ್ಟಿಗಳು ಎಲೆಗಳ ಮಧ್ಯದಲ್ಲಿ ಮೊದಲು ಕಾಣಿಸಿಕೊ೦ಡು ನ೦ತರ ಎಲೆಗಳ ಅಂಚಿನ ಕಡೆಗೆ ಹರಡುತ್ತವೆ. ಮು೦ದೆ ಈ ಪಟ್ಟಿಗಳು ಹರಡುತ್ತಾ ಸಾಗಿ ಒಂದಕ್ಕೊಂದು ಅಂಟಿಕೊ೦ಡು ಎಲೆಯ ಬಹುಭಾಗವನ್ನು ಆಕ್ರಮಿಸುತ್ತವೆ. ಮುಂದುವರಿದ ಹಂತದಲ್ಲಿ ಎಲೆಗಳು ಹರಿದು, ಒಣಗಿ ಗಿಡಕ್ಕೆ ಜೋತುಬೀಳುತ್ತವೆ.
ಹಳದಿ ಸಿಗಟೋಕಾದ ಸಂದರ್ಭದಲ್ಲಿ, ಸಣ್ಣ ಹಳದಿ ಬಣ್ಣದ ಚುಕ್ಕೆಗಳು ಅಥವಾ ಕಣ್ಣಿನ ಆಕಾರದ ಹಳದಿ ಬಣ್ಣದ ಕಲೆಗಳು ಎಲೆಗಳ ಅಂಚಿನಲ್ಲಿ ಮೊದಲ ಹಂತದಲ್ಲಿ ಕಂಡುಬರುತ್ತವೆ. ಮುಂದೆ ಇವುಗಳು ಗಾಢ ಮತ್ತು ಅಗಲವಾಗುತ್ತ ಸಾಗಿ ಎಲೆಗಳ ಮಧ್ಯ ಭಾಗಕ್ಕೆ ಹರಡುತ್ತವೆ. ಇಲ್ಲಿಯೂ ಸಹ ಮುಂದುವರಿದ ಹಂತದಲ್ಲಿ ಎಲೆಗಳು ಒಣಗುತ್ತವೆ.
ಇಲ್ಲಿಎರಡೂ ಸಂದರ್ಭಗಳಲ್ಲಿ ಎಲೆಗಳ ಹಸಿರು ಭಾಗ ಅಥವಾ ಆರೋಗ್ಯಕರ ಎಲೆಗಳ ಸಂಖ್ಯೆ ಕಡಿಮೆಯಾಗಿ ದ್ಯುತಿಸಂಶ್ಲೇಷಣೆಯಲ್ಲಿ ಪರಿಣಾಮ ಬೀರುತ್ತದೆ ಮತ್ತು ಇಳುವರಿಯನ್ನು ಕಡಿಮೆ ಮಾಡುತ್ತದೆ.






ಸಿಗಟೋಕಾ ಕಾಯಿಲೆಯ ನಿರ್ವಹಣೆ
ತೋಟದಲ್ಲಿ ಆರೋಗ್ಯಕರವಾಗಿರುವ ಬಾಳೆಯ ಗಿಡಗಳನ್ನು ಹೊಂದಿರುವುದು ಸಿಗಟೋಗಾ ಕಾಯಿಲೆಯ ಸರಿಯಾದ ನಿರ್ವಹಣೆಗೆ ಅತ್ಯಗತ್ಯ. ಚೆನ್ನಾಗಿ ಅಭಿವೃದ್ಧಿ ಹೊಂದಿದ ಬೇರಿನ ವ್ಯವಸ್ಥೆ, ದೃಢವಾದ ಕಾಂಡ ಮತ್ತು ಅಗಲವಾದ ಎಲೆಗಳನ್ನು ಹೊಂದಿರುವ ಆರೋಗ್ಯಕರ ಗಿಡಗಳು ಈ ರೋಗಕ್ಕೆ ಕಡಿಮೆ ತುತ್ತಾಗುತ್ತವೆ. ಗಿಡಗಳಿಗೆ ಸರಿಯಾದ ಪ್ರಮಾಣದ ಪೊಷಕಾ೦ಶ ಒದಗಿಸುವುದು ಮತ್ತು ಸಮರ್ಪಕವಾಗಿ ನೀರುಣಿಸಿದಾಗ ಮಾತ್ರ ಇದು ಸಾಧ್ಯ. ಕಬ್ಬಿಣ, ಮೆಗ್ನೀಸಿಯಮ್, ಸತು, ಮಾಲಿಬ್ಡಿನಮ್ ಮುಂತಾದ ಸೂಕ್ಷ್ಮ ಪೋಷಕಾಂಶಗಳ ಬಳಕೆಯು ಗಿಡಗಳ ರೋಗನಿರೋದಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ರೋಗದ ವಿರುದ್ಧ ಪ್ರತಿರೋಧ ಒಡ್ಡಲು ತುಂಬಾ ಮುಖ್ಯವಾಗಿದೆ.
ಸಿಗಟೋಕಾ ರೋಗವನ್ನು ನಿರ್ವಹಿಸಲು ಕೆಲವು ನಿರ್ದಿಷ್ಟ ಅಭ್ಯಾಸಗಳನ್ನು ಕೆಳಗಿನಂತೆ ಕೈಗೊಳ್ಳಬೇಕು:
ರೋಗಗಳು ಮತ್ತಷ್ಟು ಹರಡುವುದನ್ನು ತಪ್ಪಿಸಲು ರೋಗಪೀಡಿತ ಎಲೆಗಳ ಸಂಗ್ರಹಿಸಿ ನಾಶಮಾಡುವುದು
ಗಿಡದಿಂದ ಗಿಡಕ್ಕೆಸಾಕಷ್ಟು ಅ೦ತರವನ್ನು ಕಲ್ಪಿಸುವುದು.
ಸರಿಯಾದ ಬಸಿ ಕಾಲುವೆಯನ್ನು ಒದಗಿಸುವ ಮೂಲಕ ( ವಿಶೇಷವಾಗಿ ಮಳೆಗಾಲದಲ್ಲಿ) ನೀರು ನಿಲ್ಲುವುದನ್ನು ತಪ್ಪಿಸಿವುದು. ಹೆಚ್ಚುವರಿ ನೀರುಹಾಯಿಸುವುದು ಸಹ ಆರ್ದ್ರತೆಯನ್ನು ಹೆಚ್ಚಿಸಿ ಸುಲಭ ಮತ್ತು ವೇಗವಾಗಿ ರೋಗ ಹರಡಲು ಸಹಾಯ ಮಾಡುತ್ತದೆ. ಸಿಗಟೋಕಾ ರೋಗವನ್ನು ನಿರ್ವಹಿಸುವಲ್ಲಿ ಹನಿ ನೀರಾವರಿ ವ್ಯವಸ್ಥೆಯು ಸೂಕ್ತವೆಂದು ಪರಿಗಣಿಸಲಾಗಿದೆ.
ಗಿಡಗಳ ಸುತ್ತಮುತ್ತಲಿನ ಕಳೆಗಳನ್ನು ತೆಗೆಯುವುದು, ಅನಗತ್ಯ ಕಂದುಗಳನ್ನು ತೆಗೆಯುವುದು, ಗೊನೆ ಕೊಯ್ಲಿನ ನಂತರ ಕಾಂಡಗಳನ್ನು ಕತ್ತರಿಸುವುದು ಮುಂತಾದ ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳುವುದು,
ಸೂಕ್ತ ಶಿಲೀ೦ದ್ರ ನಾಶಕಗಳ ಸರಿಯಾದ ಪ್ರಮಾಣದಲ್ಲಿ ಬಳಕೆ.
ಆರಂಭಿಕ ಹಂತಗಳಲ್ಲಿ ರೋಗಲಕ್ಷಣಗಳನ್ನು ಗುರುತಿಸುವುದು, ಸಂಯೋಜಿತ ರೀತಿಯಲ್ಲಿ ಸರಿಯಾದ ಯಾಂತ್ರಿಕ ಮತ್ತು ರಾಸಾಯನಿಕ ಕ್ರಮಗಳನ್ನು ತೆಗೆದುಕೊಳ್ಳುವುದು ಮುಂತಾದ ಕೆಲವು ಪ್ರಯತ್ನಗಳೊಂದಿಗೆ ಸಿಗಟೋಕಾ ರೋಗವನ್ನು ಉತ್ತಮವಾಗಿ ನಿರ್ವಹಿಸಬಹುದು.