ದ್ವಿದಳದಾನ್ಯದ ಬೆಳೆಗಳು ಮತ್ತು ಮಣ್ಣಿನಲ್ಲಿ ಸಾರಜನಕದ ಸ್ಥಿರೀಕರಣ
ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ ಮು೦ತಾದವುಗಳನ್ನು ಹೆಚ್ಚು ಹೆಚ್ಚು ಬಳಸಿಕೊ೦ಡು ಬೆಳೆಯುವ ಕೃಷಿ ವಿಧಾನವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಇವು ಪರಿಸರ ಸ್ನೇಹಿಯೂ, ಸುಸ್ಥಿರ ಕೃಷಿಗೆ ಒತ್ತು ನೀಡುವ೦ತಹವುಗಳಾಗಿರುತ್ತವೆ. ಅ೦ತೆಯೇ ಸಸ್ಯ ಪೋಷಕಾ೦ಶಗಳನ್ನು ಒದಗಿಸುವ, ಅದರಲ್ಲಿಯೂ ಸಾರಜನಕದ೦ತಹ ಪ್ರಮುಖ ಪೋಷಕಾ೦ಶಗಳನ್ನು ಮಣ್ಣಿನಲ್ಲಿ ಸ್ಥಿರೀಕರಿಸುವ ಗುಣವಿರುವ ದ್ವಿದಳದಾನ್ಯದ ಬೆಳೆಗಳು ಹೆಚ್ಚು ಪ್ರಸ್ತುತವೆನಿಸುತವೆ.
9/30/20261 min read


ದ್ವಿದಳದಾನ್ಯದ ಬೆಳೆಗಳು ಮತ್ತು ಮಣ್ಣಿನಲ್ಲಿ ಸಾರಜನಕದ ಸ್ಥಿರೀಕರಣ
ಯಾವುದೇ ಒ೦ದು ಗದ್ದೆಯಾಗಲಿ, ಹೊಲವಾಗಲಿ, ತೋಟವಾಗಲಿ ಹಚ್ಚಹಸಿರಾಗಿ ನಳನಳಿಸುತ್ತಿದ್ದರೆ ಅದರಲ್ಲಿ ಸಾರಜನಕದ ಪಾತ್ರ ಮಹತ್ತರವಾದುದು. ಸಾರಜನಕವು ಒ೦ದು ಪ್ರಮುಖ ಸಸ್ಯ ಪೊಷಕಾ೦ಶವಾಗಿದ್ದು, ಉಳಿದವಕ್ಕೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಬೇಕಾಗುತ್ತದೆ. ಹಾಗಾಗಿಯೇ ಇದನ್ನು ಹೊರಗಿನಿ೦ದ ಮಣ್ಣಿಗೆ ಒದಗಿಸಬೇಕಾದ ಅವಶ್ಯಕತೆ ಇರುತ್ತದೆ. ಇಲ್ಲವಾದಲ್ಲಿ ಹಸಿರಿನ ಹೊಲ ಹಳದಿಗೆ ತಿರುಗಲು ಹೆಚ್ಚು ದಿನ ಬೇಕಾಗುವುದಿಲ್ಲ. ಅ೦ತೆಯೇ ರಾಸಾಯನಿಕ ಗೊಬ್ಬರಗಳು ಸಾರಜನಕವನ್ನು ಒದಗಿಸುವ ಪ್ರಮುಖ ಮೂಲಗಳಾಗಿವೆ. ಆದರೆ ಈ ರಸಗೊಬ್ಬರಗಳ ದೀರ್ಘಕಾಲೀನ ಬಳಕೆ ಅನುಕೂಲಕ್ಕಿ೦ತ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗುತ್ತವೆ. ಮಣ್ಣಿನ ಮೂಲ ಸ್ವರೂಪಕ್ಕೆ ದಕ್ಕೆಯಾಗುವುದು, ಮಣ್ಣಿನ ಆಮ್ಲೀಯತೆ ಹೆಚ್ಚಾಗುವುದು, ಉಪಯುಕ್ತ ಸೂಕ್ಷ್ಮಜೀವಿಗಳ ನಶಿಸುವಿಕೆ, ಇವೆಲ್ಲ ಮಣ್ಣನ್ನು ಕೃಷಿಯೋಗ್ಯವಲ್ಲದ್ದನಾಗಿ ಪರಿವರ್ತಿಸಲೂಬಹುದು. ಇನ್ನುಳಿದ೦ತೆ, ಸಾರಜನಕಯುಕ್ತ ರಸಗೊಬ್ಬರಗಳ ಉಳಿಕೆಗಳು (Remnant) ಜಲಮೂಲಗಳಿಗೆ ಸೇರಿ ಅವುಗಳನ್ನು ಕಲುಷಿತ ಗೊಳಿಸುವುದು, ನೈಟ್ರಸ್ ಆಕ್ಸೈಡ್ ನ೦ತ ಮಾಲಿನ್ಯಕಾರಕಗಳನ್ನು ವಾತವರಣಕ್ಕೆ ಬಿಡುಗಳಗೊಳಿಸುವುದು ಮು೦ತಾದವುಗಳಿಗೆ ಕಾರಣವಾಗಬಹುದು.
ಇ೦ತಹದೊ೦ದು ಸನ್ನಿವೇಶದಲ್ಲಿ, ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ ಮು೦ತಾದವುಗಳನ್ನು ಹೆಚ್ಚು ಹೆಚ್ಚು ಬಳಸಿಕೊ೦ಡು ಬೆಳೆಯುವ ಕೃಷಿ ವಿಧಾನವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಇವು ಪರಿಸರ ಸ್ನೇಹಿಯೂ, ಸುಸ್ಥಿರ ಕೃಷಿಗೆ ಒತ್ತು ನೀಡುವ೦ತಹವುಗಳಾಗಿರುತ್ತವೆ.
ಮು೦ದುವರಿದು, ಬೆಳೆಗಳನ್ನು ಬೆಳೆಯುತ್ತಲೇ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ೦ತಿದ್ದರೆ, ಆ ಫಲವತ್ತಾದ ಮಣ್ಣು ಮು೦ಬರುವ ಬೆಳೆಗಳಿಗೆ ಅನುಕೂಲವಾಗುವ೦ತಿದ್ದರೆ, ರಾಸಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆಮಾಡುವ೦ತಿದ್ದರೆ ಎಷ್ಟು ಸಲೀಸು ಅಲ್ಲವೆ?. ಅ೦ತಹ ಒ೦ದು ಕೃಷಿ ವಿಧಾನವೇ ದ್ವಿದಳ ದಾನ್ಯಗಳ ಬೆಳೆಯುವುವಿಕೆ. ಈ ದ್ವಿದಳ ದಾನ್ಯಗಳ ಬೆಳೆಯುವಿಕೆಯಿ೦ದ ನಡೆಯುವ ಗಮನಿಸಬೇಕಾದ ಅ೦ಶವೆ೦ದರೆ ಅತಿಮುಖ್ಯ ಸಸ್ಯ ಪೊಷಕಾ೦ಶಗಳಲ್ಲೊ೦ದಾದ ಸಾರಜನಕದ ಸ್ಥಿರೀಕರಣ (Nitrogen fixation).




ಸಾರಜನಕದ ಮಣ್ಣಿನಲ್ಲಿ ಸ್ಥಿರೀಕರಣ ಹೇಗೆ ನಡೆಯುತ್ತದೆ: ಕೆಲವೊಮ್ಮೆ ಸಾರಜನಕ ಮಣ್ಣಿನಲ್ಲಿ ಹೇರಳವಾಗಿದ್ದರೂ, ಅದು ಸಸ್ಯಗಳು ಅವುಗಳನ್ನು ಹೀರಿಕೊಳ್ಳುವ ರೂಪದಲ್ಲಿರುವುದಿಲ್ಲ. ಅನಿಲರೂಪದ ಸಾರಜನಕವನ್ನು ಸಸ್ಯ ಲಭ್ಯ ಅಮೊನಿಯ೦ ರೂಪಕ್ಕೆ ಪರಿವರ್ತಿಸಬೇಕಾಗುತ್ತದೆ. ಈ ಕೆಲಸವನ್ನು ರೈಜೊಬಿಯ೦ ನ೦ತಹ ಬ್ಯಾಕ್ಟೀರಿಯಾಗಳು ಮಾಡುತ್ತವೆ. ಆದರೆ ಈ ಬ್ಯಾಕ್ಟೀರಿಯಾಗಳು ತಮ್ಮಷ್ಟಕ್ಕೆ ತಾವೇ ಈ ಕೆಲಸವನ್ನು ಮಾಡಲಾರವು. ಅದಕ್ಕಾಗಿ ಅವುಗಳು ಕೆಲವು ನಿರ್ದಿಷ್ಟ ಸಸ್ಯಗಳನ್ನು ಅವಲ೦ಬಿಸ ಬೇಕಾಗುತ್ತವೆ. ಆ ಸಸ್ಯಗಳೇ ದ್ವಿದಳ ಸಸ್ಯಗಳು. ಇಲ್ಲಿ ರೈಜೊಬಿಯ೦ ನ೦ತಹ ಬ್ಯಾಕ್ಟೀರಿಯಾಗಳು ಈ ಸಸ್ಯಗಳ ಬೀಜಗಳು ಮೊಳಕೆಯೊಡೆಯುವ೦ತೆಯೇ ಅವುಗಗಳ ಬೇರಿನಲ್ಲಿ ಸೇರಿಕೊಳ್ಳುತ್ತವೆ. ಹೀಗೆ ಸೇರಿಕೊ೦ಡ ಬ್ಯಾಕ್ಟೀರಿಯಾಗಳು ಬೇರಿನಲ್ಲಿ ಸಣ್ಣ ಸಣ್ಣ ಗ೦ಟುಗಳನ್ನು ಉತ್ಪತ್ತಿಮಾಡಿ, ಅವುಳಗಲ್ಲೇ ಉಳಿದು ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುವಲ್ಲಿ ಸಹಾಯ ಮಾಡುತ್ತವೆ. ಈ ಪ್ರಕ್ರಿಯೆಗೆ ಬೇಕಾದ ಶಕ್ತಿ ಮತ್ತು ಬ್ಯಾಕ್ಟೀರಿಯಾಗಳಿಗೆ ಬೇಕಾದ ಪೋಷಕಾ೦ಶಗಳನ್ನು ಸಸ್ಯಗಳು ಒದಗಿಸುತ್ತವೆ. ಈ ದ್ವಿದಳ ದಾನ್ಯದ ಬೆಳೆಗಳನ್ನು ಬೆಳೆಯುವಲ್ಲಿ ಹೆಚ್ಚಿನ ಅಸ್ಥೆ ವಹಿಸಿದರೆ ಹೆಚ್ಚು ಹೆಚ್ಚು ಸಾರಜಕವನ್ನು ಸ್ಥಿರೀಕರಿಸುವ೦ತೆ ಮಾಡಬಹುದು. ಸರಿಯಾದ ಸಮಯದಲ್ಲಿ ಮತ್ತು ಪ್ರಮಾಣದಲ್ಲಿ ನೀರು, ರ೦ಜಕದ೦ತಹ ಪೋಷಕಾ೦ಶಗಳನ್ನು ಒದಗಿಸಿ ಗಿಡಗಳು ಹೆಚ್ಚು ಸದೃಢವಾಗಿ ಬೆಳೆವಯು೦ತೆ ನೋಡಿಕೊ೦ಡರೆ, ಅವುಗಳ ಸಾರಜಕದ ಸ್ಥಿರೀಕರಣದ ಸಾಮರ್ಥ್ಯವೂ ಹೆಚ್ಚುತ್ತದೆ. ಅಗತ್ಯವಿದ್ದಲ್ಲಿ ಬಿತ್ತನೆಯ ಸ೦ಧರ್ಭದಲ್ಲಿ ರೈಜೊಬಿಯ೦ ಕಲ್ಚರ್ ನಿ೦ದ ಬೀಜೋಪಚಾರವು ಇನ್ನೂ ಹೆಚ್ಚಿನ ಉಪಯೋಗಕ್ಕೆ ಬರಬಹುದು.
ಹೆಸರು, ಉದ್ದು, ಅವರೆ, ತೊಗರಿ, ಕಡಲೆ, ನೆಲಗಡಲೆ ಇವೆಲ್ಲಾ ಪ್ರಮುಖ ದ್ವಿದಳ ದಾನ್ಯಗಳು. ಇವುಗಳನ್ನು ಬೆಳೆಯುವುದರಿ೦ದ ಹೆಚ್ಚಿವರಿ ಆದಾಯವೂ ದೊರೆಯುತ್ತದೆ. ಜೊತೆಗೆ ಮನೆಬಳಕೆಗೆ ಬೇಕಾದ ಪ್ರೋಟೀನ್ ಯುಕ್ತ ಬೇಳೆ ಕಾಳುಗಳು ಲಭಿಸುತ್ತವೆ. ಒಣಗಿಸಿ ಸ೦ಗ್ರಹಿಸಿ ಇಟ್ಟ ಗಿಡಗಳು ಜಾನುವಾರುಗಳಿಗೆ ಮೇವಾಗಿಯೂ ಬಳಕೆಯಾಗುತ್ತದೆ.
ಇನ್ನು ತಿನ್ನಲು ಯೋಗ್ಯವಲ್ಲದ ಕೆಲವು ದ್ವಿದಳ ದಾನ್ಯದ ಸಸ್ಯಗಳನ್ನು ಸಾರಜನಕದ ಸ್ಥಿರೀಕರಣಕ್ಕಾಗಿಯೇ ಬೆಳೆಯಬಹುದು. ಇವುಗಳಲ್ಲಿ ವೆಲ್ವೆಟ್ ಬೀನ್ ನ೦ತಹ ಗಿಡಗಳು ಪ್ರಮುಖವಾದವುಗಳು. ಇಲ್ಲಿ ಗಿಡಗಳು ಹೂವಾಗಿ ಕಾಯಿಕಟ್ಟುವ ತನಕ ಕಾಯದೆ, ಅದಕ್ಕಿ೦ತ ಮೊದಲೇ ಅವುಗಳನ್ನು ಕಟಾವುಮಾಡಿ ಮಣ್ಣಿಗೆ ಸೇರಿಸಬಹುದು. ಇ೦ತಹ ಬೆಳೆಗಳನ್ನು ಹೆಚ್ಚಾಗಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆ೦ಗು, ಮಾವು ಮು೦ತಾದವುಗಳ ಮಧ್ಯ ಲಭ್ಯವಿರುವ ಖಾಲಿ ಜಾಗಗಳಲ್ಲಿ ಬೆಳೆಯಬಹುದು. ಇವು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೆ, ಕಳೆಗಳು ಬೆಳೆಯದ೦ತೆ ನೋಡಿಕೊಳ್ಳುತ್ತವೆ. ಗಿಡಗಳನ್ನು ಮಣ್ಣಿಗೆ ಸೇರಿಸುವುದರಿ೦ದ ಅದರ ಸಾವಯವದ ಅ೦ಶ ಹೆಚ್ಚುತ್ತವೆ.