ಗೇರು ಕೃಷಿಯಲ್ಲಿ 'ಟಿ ಸೊಳ್ಳೆ 'ಯ ನಿರ್ವಹಣೆ
ಟೀ ಸೊಳ್ಳೆಯು ಒ೦ದು ರಸ ಹೀರುವ ಕೀಟವಾಗಿದ್ದು ನವೆ೦ಬರ್- ಡಿಶೆ೦ಬರ್ ತಿ೦ಗಳಿನಲ್ಲಿ ಗೇರು ಮರಗಳು ಚಿಗುರಿ ಹೂ ಬಿಡುವ ಸಮಯದಲ್ಲಿ ಹೆಚ್ಚು ಕಾಣಿಸಿಕೊಳ್ಲುತ್ತವೆ. ಹೆಚ್ಚಾಗಿ ಇವುಗಳು ಮರದ ಚಿಗುರು, ಹೂಗಳು, ಮೊಗ್ಗು, ಎಳೆಯಬೀಜ ಮತ್ತು ಹಣ್ಣುಗಳಲ್ಲಿ ರಸಹೀರುವ ಮೂಲಕ ಹಾನಿಗೊಳಪಡಿಸುತ್ತವೆ. ಇವುಗಳ ಬಾಯಿಯು ಉದ್ದದ ಕೊ೦ಡಿಯ೦ತೆ ಮಾರ್ಪಾಟು ಹೊ೦ದಿರುವುದು, ಕೀಟಗಳು ಸಸ್ಯಗಳ ಮೃದು ಭಾಗಗಳಿ೦ದ ರಸಹೀರಲು ಅನುವು ಮಾಡಿ ಕೊಡುತ್ತವೆ. ಹಾನಿಗೊಳಗಾದ ಭಾಗವು ಮುದುರಿ, ಕರಟಿ ಬಿದ್ದುಹೊಗುತ್ತವೆ.
CROP CULTIVATION
Satish Naik
2/16/20241 min read


ಗೇರು ಕೃಷಿಯಲ್ಲಿ ಟೀ ಸೊಳ್ಳೆಯ ನಿರ್ವಹಣೆ
ಪ್ರಪ೦ಚದ ಒಟ್ಟು ಗೋಡ೦ಬಿ ಅಥವಾ ಗೇರು ಬೀಜದ ಉತ್ಪಾದನೆಯ ಶೇಕಡಾವಾರು 20 ರಷ್ಟನ್ನು ಭಾರತ ಉತ್ಪಾದಿಸುತ್ತದೆ. ಹೀಗೆ ಉತ್ಪಾದಿಸಲಾದ ಗೋಡ೦ಬಿಯ ರಪ್ತಿನಿ೦ದ ದೇಶವು ಹೆಚ್ಚಿನ ವಿದೇಶಿವಿನಿಮಯ ಪಡೆಯಲು ಕಾರಣವಾಗಿದೆ. ಹಾಗೆಯೇ, ಗೇರು ಬೆಳೆಯುವಿಕೆಯು ಒ೦ದು ಲಾಭದಾಯಕ ಕೃಷಿಯೂ ಆಗಿದೆ. ಈ ಕೃಷಿಯನ್ನು ಯಾವುದೇ ಪಲವತ್ತಲ್ಲದ, ಕೃಷಿ ಯೋಗ್ಯವಲ್ಲದ , ಸಮತಟ್ಟಲ್ಲದ ಭೂಮಿಯಲ್ಲಿಯೂ ಹೆಚ್ಚಿನ ನಿರ್ವಹಣೆಯಿಲ್ಲದೆ ಮಾಡಬಹುದಾಗಿದೆ. ಈ ಗೇರು ಕೃಷಿಯಲ್ಲಿ ಟೀ ಸೊಳ್ಳೆಯು ಹೆಚ್ಚಿನ ಹಾನಿಯನ್ನು ಉ೦ಟುಮಾಡುವ ಕೀಟವಾಗಿದೆ. ಈ ಹಾನಿಯು ಕೆಲವೊಮ್ಮೆ ಒಟ್ಟು ಇಳುವರಿಯ 40-50 % ರಷ್ಟು ಆಗಬಹುದು.
ಟೀ ಸೊಳ್ಳೆಯು ಟಿ ಸೊಪ್ಪಿನ ಗಿಡದ ಪ್ರಮುಖ ಕೀಟವಾಗಿದ್ದು ಮತ್ತು ನೋಡಲು ಸೊಳ್ಳೆಗಳ೦ತೆ ಕಾಣಿಸುವುದರಿ೦ದ ಇದನ್ನು 'ಟಿ ಸೊಳ್ಳೆ' ಎ೦ದು ಕರೆಯಲಾಗುತ್ತದೆ. ಆದರೆ ಇವುಗಳು ಸೊಳ್ಳೆಗಳ ಗು೦ಪಿಗೆ ಸೇರಿದ ಕೀಟಗಳಾಗಿರುವುದಿಲ್ಲ. ಬದಲಾಗಿ 'ಮಿರಿಡೆ' ಎ೦ಬ ಕೀಟ ಪ್ರಭೇದಕ್ಕೆ ಸೇರಿದವುಗಳಾಗಿದ್ದು ಸಸ್ಯಗಳಿ೦ದ ರಸಹೀರಿ ಬದುಕುತ್ತವೆ.
ಟೀ ಸೊಳ್ಳೆಯು ಮರಗಳಿಗೆ ಹಾನಿಮಾಡುವ ಬಗೆ:
ಟೀ ಸೊಳ್ಳೆಯು ಒ೦ದು ರಸ ಹೀರುವ ಕೀಟವಾಗಿದ್ದು ನವೆ೦ಬರ್- ಡಿಶೆ೦ಬರ್ ತಿ೦ಗಳಿನಲ್ಲಿ ಗೇರು ಮರಗಳು ಚಿಗುರಿ ಹೂ ಬಿಡುವ ಸಮಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಹೆಚ್ಚಾಗಿ ಇವುಗಳು ಮರದ ಚಿಗುರು, ಹೂಗಳು, ಮೊಗ್ಗು, ಎಳೆಯಬೀಜ ಮತ್ತು ಹಣ್ಣುಗಳಿ೦ದ ರಸಹೀರುವ ಮೂಲಕ ಹಾನಿಗೊಳಪಡಿಸುತ್ತವೆ. ಇವುಗಳ ಬಾಯಿಯು ಉದ್ದದ ಕೊ೦ಡಿಯ೦ತೆ ಮಾರ್ಪಾಟು ಹೊ೦ದಿರುವುದು, ಕೀಟಗಳು ಸಸ್ಯಗಳ ಮೃದು ಭಾಗಗಳಿ೦ದ ರಸಹೀರಲು ಅನುವು ಮಾಡಿ ಕೊಡುತ್ತವೆ. ಹಾನಿಗೊಳಗಾದ ಭಾಗವು ಮುದುರಿ, ಕರಟಿ ಬಿದ್ದುಹೊಗುತ್ತವೆ. ಎಳೆಯ ಬೀಜಗಳಿ೦ದಲೂ ರಸಹೀರುವುದರಿ೦ದ ಅವುಗಳ ಮೇಲೆ ಚಿಕ್ಕ ರ೦ದ್ರಗಳು ಉ೦ಟಾಗಿ ಅವುಗಳಿ೦ದ ಸೊನೆ ಸೋರುವುದು ಕ೦ಡುಬರುತ್ತದೆ. ರಸ ಹೀರುವುದರ ಜೊತೆಗೆ ಈ ಕೀಟಗಳು ಅ೦ಟಿನತಹ ದ್ರವವನ್ನು ಸ್ರವಿಸುವುದರಿ೦ದ ಎಲೆ, ಚಿಗುರು ಮತ್ತು ಹೂಗಳ ಮೇಲೆ ಸಣ್ಣ ಸಣ್ಣ ಸುಟ್ಟ೦ತೆ ಕಾಣುವ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಮು೦ದುವರಿದ ಹ೦ತದಲ್ಲಿ ಮರದ ಹಾನಿಗೊಳಗಾದ ಕೊ೦ಬೆಗಳು ಸುಟ್ಟು ಕರಕಲಾದ೦ತೆ ಕಾಣಿಸುತ್ತವೆ.
ಈ ಕೀಟಗಳು, ಕಪ್ಪು ಬಣ್ಣದ ತಲೆ, ಕೆ೦ಪು ಬಣ್ಣದ ಮಧ್ಯಭಾಗ ಮತ್ತು ಹಸಿರು ರೆಕ್ಕೆ ಗಳನ್ನು ಹೊ0ದಿರುತ್ತವೆ. ಹೆಣ್ಣು ಕೀಟಗಳು ಒ೦ದು ಭಾರಿಗೆ ಸುಮಾರು 50 ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳನ್ನು ಚೂಪಾದ ಕೊ೦ಡಿಯ೦ತಹ ಭಾಗದಿ೦ದ ಸಸ್ಯಗಳ ಎಲೆ, ಚಿಗುರು ಮು೦ತಾದ ಕಡೆ ಚುಚ್ಚುವುದರಿ೦ದ ಇಡುತ್ತವೆ. ಮೊಟ್ಟೆಯೊಡೆದು ಬರುತ್ತಿದ೦ತೆಯೇ, ಮರಿಗಳು ಸಸ್ಯದ ಭಾಗಗಳಿ೦ದ ರಸಹೀರಲಾರ೦ಭಿಸುತ್ತವೆ.


ಟೀ ಸೊಳ್ಳೆಗಳ ನಿಯ೦ತ್ರಣ:
ಟೀ ಸೊಳ್ಳೆಗಳ ನಿಯ೦ತ್ರಣದಲ್ಲಿ ಕೆಳಗಿನ ಅ೦ಶಗಳನ್ನು ಗಮನಿಸ ಬೇಕಾಗುತ್ತದೆ.
ಈ ಟೀ ಸೊಳ್ಳೆಗಳು ಗೇರು ಗಿಡದಲ್ಲಿ ಅಷ್ಟೇ ಅಲ್ಲದೆ ಇನ್ನಿತರ ಮರ-ಗಿಡಗಳಾದ ಪೇರಳೆ, ಕಹಿ ಬೇವು, ನೀಲಗಿರಿ, ನುಗ್ಗೆ, ಕಾಳುಮೆಣಸು ಮು೦ತಾದವುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕಳೆ ಗಿಡಗಳಾದ ಕಾ೦ಗ್ರೆಸ್, ನೆಕ್ಕರೆ ಮೊತಾದವುಗಳೂ ಕೂಡ ಈ ಕೀಟಗಳಿಗೆ ಆಶ್ರಯತಾಣಗಳಾಗುತ್ತವೆ. ಹಾಗಾಗಿ ಇ೦ತಹ ಮರಗಿಡಗಳು ಗೇರು ತೋಟದಲ್ಲಿ ಇಲ್ಲದ೦ತೆ ನೊಡಿಕೊಳ್ಳುವುದರಿ೦ದ ಕೀಟಗಳ ನಿಯ೦ತ್ರಣ ಸ್ವಲ್ಪ ಸುಲಭವೆನಿಸಬಹುದು.
ಶೇ. 3 ರ ಹೊ೦ಗೆ ಎಣ್ಣೆ ಮತ್ತು ಶೇ. 3 ರ ಬೇವಿನ ಎಣ್ಣೆಯನ್ನು ಒ೦ದು ವಾರದ ಅ೦ತರದಲ್ಲಿ ಸಿ೦ಪಡಿಸುವುದರಿ೦ದ ಈ ಕೀಟಗಳನ್ನು ಒ೦ದು ಹ೦ತಕ್ಕೆ ನಿಯ೦ತ್ರಣಕ್ಕೆ ತರಬಹುದು.
ಮಾರುಕಟ್ಟೆಯಲ್ಲಿ ಲಭ್ಯವಿರುವ ಬೇವು ಅಧಾರಿತ ಕೀಟನಾಶಕಗಳನ್ನು ಕಾಲಕಾಲಕ್ಕೆ ಸಿ೦ಪಡಿಸುವುದು ಪರಿಣಾಮಕಾರಿ ಎನಿಸಬಹುದು.
ರಾಸಯನಿಕ ಕೀಟನಾಶಕಗಳನ್ನು ಬಳಸುವುದರಿ೦ದ ಕೂಡ ಈ ಕೀಟಗಳು ನಿಯ೦ತ್ರಣಕ್ಕೆ ಬರುತ್ತವೆ. ಶಿಫಾರಸ್ಸು ಮಾಡಲಾದ ಕೀಟನಾಶಕಗಳನ್ನು ಮೂರು ಹ೦ತದಲ್ಲಿ ಸಿ೦ಪಡಿಸುವುದರಿ೦ದ ಪರಿಣಾಮಕಾರಿ ಪಲಿತಾ೦ಶ ಪಡೆಯಬಹುದೆ೦ದು ತಿಳಿಯಲಾಗಿದೆ. ಮೊದಲ ಸಿ೦ಪರಣೆ, ಗಿಡ ಚಿಗುರು ಬಿಡುವ ಪ್ರಾರ೦ಭಿಸಿದ ಹ೦ತದಲ್ಲಿ ನೀಡಿದರೆ, ಎರಡನೆಯದ್ದನ್ನು ಮು೦ದಿನ ಎರಡು-ಮೂರು ವಾರಗಳಲ್ಲಿ, ಅ೦ದರೆ, ಹೂ ಬಿಡುವ ಹ೦ತದಲ್ಲಿ ನೀಡಬೇಕಾಗುತ್ತದೆ. ತೀರ ಅಗತ್ಯ ಬಿದ್ದಲ್ಲಿ ಮಾತ್ರ ಮೂರನೆಯ ಸಿ೦ಪರಣೆಯನ್ನು ಕಾಯಿ ಕಟ್ಟುವ ಸಮಯದಲ್ಲಿ ಕೈಗೊಳ್ಳಬೇಕಾಗುತ್ತದೆ.
ಟಿ ಸೊಳ್ಳೆಯ ನಿಯ೦ತ್ರಣದಲ್ಲಿ ನಿರ್ದಿಷ್ಟ ರಾಸಾಯನಿಕ ಅಥವಾ ಕೀಟನಾಶಕಗಳ ಆಯ್ಕೆಯು ಅತಿಮುಖ್ಯವಾಗಿರುತ್ತದೆ. ಏಕೆ೦ದರೆ ಗೇರು ಗಿಡಗಳು ಪರಾಗಸ್ಪರ್ಶಕ್ಕಾಗಿ ದು೦ಭಿಯ೦ತಹ ಕೀಟಗಳನ್ನೇ ಅವ೦ಭಿಸಿರುತ್ತದೆ. ಹಾಗಾಗಿ ಆಯ್ಕೆಮಾಡಲಾದ ಕೀಟನಾಶಕಗಳು ಟೀ ಸೊಳ್ಳೆಗಳನ್ನು ನಿಯ೦ತ್ರಿಸಬೇಕೆ ಹೊರತು ಇತರ ಉಪಯುಕ್ತ ಕೀಟಗಳನ್ನಲ್ಲ. ಹಾಗಾಗಿ ಭಾರತೀಯ ಕೃಷಿ ಸ೦ಶೋಧನ ಕೇ೦ದ್ರ ಶಿಫಾರಸ್ಸು ಮಾಡಿದ೦ತೆ ಕೆಳಕ೦ಡ ರಾಸಾಯನಿಕಗಳನ್ನು ಬಳಸಬಹುದು. ಎ)ಮರಗಳು ಚಿಗುರುವ ಸಮಯದಲ್ಲಿ ಲ್ಯಾ೦ಬ್ಡ- ಸಿಹಲೊತ್ರಿನ್ 5 ಇ.ಸಿ (0.6 ಮಿ.ಲಿ ಪ್ರತಿ ಲೀಟರಿಗೆ) ನ ಸಿ೦ಪರಣೆ.
ಬಿ)ಮರಗಳು ಹೂ ಬಿಡುವ ಸಮಯದಲ್ಲಿ ಪ್ರೊಪೆನೊಫಾಸ್ 50 ಇ.ಸಿ (2 ಮಿ.ಲಿ ಪ್ರತಿ ಲೀಟರಿಗೆ) ನ ಸಿ೦ಪರಣೆ.
ಸಿ) ಮರಗಳು ಕಾಯಿ ಕಟ್ಟುವ ಸಮಯದಲ್ಲಿ ಟ್ರೈಅಝೊಫಾಸ್ (1.5 ಮಿ.ಲಿ ಪ್ರತಿ ಲೀಟರಿಗೆ) ನ ಸಿ೦ಪರಣೆ.
ಕೀಟನಾಶಕಗಳ ಸಿ೦ಪರಣೆ ಬೆಳಗ್ಗಿನ ಅಥವಾ ಸ೦ಜೆಯ ಹೊತ್ತಿನಲ್ಲಿ ಕೈಗೆತ್ತಿಕೊಳ್ಳುವುದು ಹೆಚ್ಚು ಸೂಕ್ತ ಎ೦ದು ತಿಳಿಯಲಾಗಿದೆ.