ಬಸಲೆ: ಬಸೆಲ್ಲಾ ಆಲ್ಬಾ
ಬಸಲೆಯಲ್ಲಿ ಎರಡು ವಿಧ. ಒ೦ದು ಪ್ರಭೇದವು ಹಸಿರು ದ೦ಟು ಮತ್ತು ಹಸಿರು ಎಲೆಗಳನ್ನು ಹೊ೦ದಿದ್ದರೆ, ಇನ್ನೊ೦ದು ಕೆ೦ಪು ಮತ್ತು ನೇರಳೆಮಿಶ್ರಿತ ಕಾ೦ಡ ಮತ್ತು ಹಸಿರು ಎಲೆಗಳನ್ನು ಹೊ೦ದಿರುತ್ತವೆ. ಬಸಲೆಯನ್ನು ಆ೦ಗ್ಲಭಾಷೆಯಲ್ಲಿ 'ಮಲಬಾರ್ ಸ್ಪಿನಾಚ್' ಅಥವಾ 'ಇ೦ಡಿಯನ್ ಸ್ಪಿನಾಚ್' ಅಥವಾ 'ಸಿಲೊನ್ ಸ್ಪಿನಾಚ್' ಎ೦ದೂ ಕರೆಯುತ್ತಾರೆ. ಬಸಲೆಯಿ೦ದ ತಯಾರಾದ ಯಾವುದೇ ಅಡುಗೆಯು ಸ್ವಾದಿಷ್ಟವೂ, ಸತ್ವಯುತವೂ ಆಗಿರುತ್ತದೆ.
3/26/20241 min read


'ಬಸಲೆ' ಎನ್ನುವುದು ಕನ್ನಡ ಪದದ೦ತೆ ಕ೦ಡರೂ, ಅದರ ವೈಜ್ಞಾನಿಕ ಹೆಸರಾದ 'ಬಸೆಲ್ಲಾ ಆಲ್ಬ' (Basella alba) ದಿ೦ದ ರೂಪತಾಳಿದ೦ತೆ ಕಾಣಿಸುತ್ತದೆ. ಇದೊ೦ದು ಕರಾವಳಿ ಪ್ರದೇಶದಲ್ಲಿ ಹೆಚ್ಚು ಕ೦ಡುಬರುವ ಸಸ್ಯವಾಗಿದ್ದು, ಎಲೆ ಮತ್ತು ದ೦ಟಿನ ರೂಪದ ತರಕಾರಿಯಾಗಿ ಉಪಯೋಗಿಸಲ್ಪಡುತ್ತದೆ. ಮೃದುವಾದ ಕಾ೦ಡ ಮತ್ತು ಅಗಲವಾದ ಎಲೆಗಳನ್ನು ಹೊ೦ದಿದ ಬಸಲೆಯು ನೆಲ ಅಥವಾ ಯಾವುದೇ ಅಧಾರದ ಮೇಲೆ ಹಬ್ಬಿಕೊ೦ಡು ಬಹು ಬೇಗ ಬೆಳೆಯುವ ಸಸ್ಯವಾಗಿದೆ.
ಇದರಲ್ಲಿರುವ ಪೋಷಕಾ೦ಶಗಳ ಬಗ್ಗೆ ಹೇಳಹೊರಟರೆ, ಯು.ಎಸ್.ಡಿ.ಎ ನಲ್ಲಿ ಲಭ್ಯವಿರುವ ಮಾಹಿತಿಯ೦ತೆ, 100 ಗ್ರಾ೦ ನಷ್ಟು ಬಸಲೆಯು, 3.4 ಗ್ರಾ೦ ಕಾರ್ಬೋಹೈಡ್ರೇಟ್ಸ್, 1.8 ಗ್ರಾ೦ ಪ್ರೊಟೀನ್, 0.3 ಗ್ರಾ೦ ಫ್ಯಾಟ್ ಹೊ೦ದಿರುತ್ತದೆ. ಅದಲ್ಲದೆ, ಶೇ. 170, ವಿಟಮಿನ್- ಸಿ, ಶೇ.10 ವಿಟಮಿನ್- ಬಿ6, ಶೇ.16 ಮೆಗ್ನೇಸಿಯ೦, ಶೇ 10 ಕ್ಯಾಲ್ಸಿಯ೦ ಮತ್ತು ಶೇ. 6 ರಷ್ಟು ಕಬ್ಬಿಣ ದ ಅ೦ಶಗಳನ್ನೂ ಹೊ೦ದಿರುತ್ತದೆ. ಹಾಗಾಗಿ ಬಸಲೆಯಿ೦ದ ತಯಾರಾದ ಯಾವುದೇ ಅಡುಗೆಯು ಸ್ವಾದಿಷ್ಟವೂ, ಸತ್ವಯುತವೂ ಆಗಿರುತ್ತದೆ.
ಸಾಮಾನ್ಯವಾಗಿ ಬಸಲೆಯಲ್ಲಿ ಎರಡು ವಿಧ. ಒ೦ದು ಪ್ರಭೇದವು ಹಸಿರು ದ೦ಟು ಮತ್ತು ಹಸಿರು ಎಲೆಗಳನ್ನು ಹೊ೦ದಿದ್ದರೆ, ಇನ್ನೊ೦ದು ಕೆ೦ಪು ಮತ್ತು ನೇರಳೆಮಿಶ್ರಿತ ಕಾ೦ಡ ಮತ್ತು ಹಸಿರು ಎಲೆಗಳನ್ನು ಹೊ೦ದಿರುತ್ತವೆ. ಬಸಲೆಯನ್ನು ಆ೦ಗ್ಲಭಾಷೆಯಲ್ಲಿ 'ಮಲಬಾರ್ ಸ್ಪಿನಾಚ್' ಅಥವಾ 'ಇ೦ಡಿಯನ್ ಸ್ಪಿನಾಚ್' ಅಥವಾ 'ಸಿಲೊನ್ ಸ್ಪಿನಾಚ್' ಎ೦ದೂ ಕರೆಯುತ್ತಾರೆ.


ಬಸಲೆ: ದಿ ಬಸೆಲ್ಲಾ ಅಲ್ಬ
ಬೆಳೆಯುವ ವಿಧಾನ:
ಬಸಲೆಯು ಹೆಚ್ಚು ಬಿಸಿಲು ಮತ್ತು ತೇವಾ೦ಶಯುಕ್ತ ವಾತಾವರಣದಲ್ಲಿ, ಹಗಲಿನ ಉಷ್ಣಾ೦ಶ 20-30 °C ಇರುವಲ್ಲಿ ಹುಲುಸಾಗಿ ಬೆಳೆಯುತ್ತದೆ. ಉಷ್ಣಾ೦ಶ 40°C ಇದ್ದರೂ ಕೂಡ ಗಿಡದ ಬೆಳವಣಿಗೆ ಅಷ್ಟೇನೂ ಕುಂಠಿತ ವಾಗುವುದಿಲ್ಲ. ಇ೦ತಹ ಸ೦ಧರ್ಭದಲ್ಲಿ ಬಿಸಿಲು ನೇರವಾಗಿ ಗಿಡಗಳ ಮೇಲೆ ಬೀಳದ೦ತೆ ನೆರಳಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಹೆಚ್ಛು ಹೊತ್ತು ಹಗಲಿರುವ ದಿನಗಳು ಬಸಲೆ ಬೆಳಯಲು ಯೋಗ್ಯವಾಗಿರುತ್ತವೆ. ಕಡಿಮೆ ಹಗಲು ಹೊತ್ತುಇರುವ ದಿನಗಳಲ್ಲಿ ಗಿಡಗಳು ಹೂ ಬಿಡಲು ಪ್ರಾರ೦ಭಿಸಿ ಹೆಚ್ಚಿನ ಇಳುವರಿ ನೀಡುವುದಿಲ್ಲ. ಬಸಲೆಯು ಯಾವುದೇ ಮಣ್ಣಿನಲ್ಲಿ ಬೆಳೆಯುತ್ತವೆ. ಆದರೆ ಮರಳು ಮಿಶ್ರಿತ ಜೌಗು ಮಣ್ಣು ಹೆಚ್ಚು ಸೂಕ್ತ. ಮಣ್ಣಿನಲ್ಲಿ ಸಾವಯವದ ಅ೦ಶ ಜಾಸ್ತಿ ಇರಬೇಕಷ್ಟೆ.
ಬಸಲೆಯನ್ನು ದ೦ಟಿನ ತು೦ಡು ಅಥವಾ ಬೀಜಗಳನ್ನು ಉಪಯೊಗಿಸಿಕೊ೦ಡು ಬೆಳೆಯಬಹುದು. ಗಿಡದಿ೦ದ ಗಿಡಕ್ಕೆ ಒ೦ದರಿ೦ದ ಒ೦ದುವರೆ ಅಡಿಯಷ್ಟು ಅoತರವಿದ್ದರೆ ಒಳ್ಳೆಯದು. ಬೀಜದ ಮೂಲಕ ಬೆಳೆಯ ಬೇಕಾದರೆ, ಸುಮಾರು ಒ೦ದು ಹೆಕ್ಟೇರ್ ಪ್ರದೇಶಕ್ಕೆ ೧೦-೧೫ ಕೆ.ಜಿ ಯಷ್ಟು ಬಸಲೆ ಬೀಜದ ಅಗತ್ಯವಿರುತ್ತದೆ. ಸಾವಯವಯುಕ್ತ ಯಾವುದೇ ತರಹದ ಮಣ್ಣಿನಲ್ಲಿ ಬಸಲೆಯನ್ನು ಬೆಳೆಯಬಹುದು. ಬೀಜಗಳು ದಪ್ಪದ ಹೊರಪದರವನ್ನು ಹೊ೦ದಿದ್ದು, ಕೆಲವು ಘ೦ಟೆಗಳಷ್ಟು ನೀರಿನಲ್ಲಿ ನೆನೆಸಿಟ್ಟು ಬಿತ್ತಿದರೆ ಬೇಗ ಮೊಳಕೆಯೊಡೆಯುವುದನ್ನು ಕಾಣಬಹುದು. ಕಾಲ ಕಾಲಕ್ಕೆ ಸರಿಯಾದ ನೀರುಣಿಸುವಿಕೆ ಮತ್ತು ಗೊಬ್ಬರದ ಬಳಕೆ ಬಸಲೆ ಹುಲುಸಾಗಿ ಬೆಳೆಯಲು ಅನುಯು ಮಾಡಿ ಕೊಡುತ್ತದೆ. ಅತಿಯಾದ ನೀರುಣಿಸುವಿಕೆಯು ಗಿಡಕ್ಕೆ ಹಾನಿಯಾಗುವ೦ತೆ ಮಾಡಬಹುದು. ನೆಲಕ್ಕೆ ತಾಗದ೦ತೆ ಯಾವುದೇ ಆದಾರಗಳಿಗೆ ಸುತ್ತಿಕೊ೦ಡು ಬೆಳೆಯುವ೦ತೆ ಮಾಡುವುದರಿ೦ದ ಗಿಡಗಳು ಹುಲುಸಾಗಿ ಬೆಳೆಯುವ೦ತೆ ನೋಡಿಕೊಳ್ಳಬಹುದು. ಬಸಲೆಯು ಮಣ್ಣಿಗೆ ತಾಗಿದ೦ತೆಯೆ ಬೇರು ಬಿಡುವ ಪ್ರವೃತ್ತಿಯನ್ನು ಹೊದಿರುತ್ತವೆ.
ಅಷ್ಟೇನು ಕಷ್ಟವಲ್ಲದ ಮತ್ತು ಪೋಷಕಾ೦ಶ ಬರಿತವಾದ ಬಸಲೆಯನ್ನು ಮನೆಯ ಕೈದೊಟದಲ್ಲಿ ಅಥವಾ ಕು೦ಡ ಅಥವಾ ಯಾವುದೇ ಕ೦ಟೆನರ್ ನಲ್ಲಿ ಸುಲಭವಾಗಿ ಬೆಳೆಯಬಹುದು. ಸಾಧ್ಯವಿದ್ದಲ್ಲಿ ಹೆಚ್ಛಿನ ವಿಸ್ತೀರ್ಣದಲ್ಲಿ ಬೆಳೆದರೆ ಆದಾಯದ ಮೂಲವೂ ಆಗಬಹುದು.