ಇಸ್ರೇಲಿಯನ್ ಮಾದರಿ ಕೃಷಿ

Blog post description.

GENERAL

6/10/20251 min read

ಇಸ್ರೇಲ್ ಮಾದರಿ ಕೃಷಿ

           ಇಸ್ರೇಲ್ 1948 ರಲ್ಲಿ ಸ್ವತ​೦ತ್ರ ರಾಷ್ಟ್ರವಾಗಿ ಸ್ಥಾಪಿತವಾದಾಗ ಅದು ವಿಸ್ತಾರವಾದ ಮತ್ತು ಫಲವತ್ತಾದ ಕೃಷಿ ಭೂಮಿಯನ್ನೇನು ಹೊ೦ದಿರಲಿಲ್ಲ​. ಜೊತೆಗೆ ಅಲ್ಲಿನ ಜನರು ಕೃಷಿಯ ಬಗ್ಗೆ ಯಾವುದೇ ಪರಿಣತಿಯನ್ನು ಹೊ೦ದಿದವರಾಗಿರಲಿಲ್ಲ​. ಅಲ್ಲಿನ ಹವಾಮಾನವೂ ಕೃಷಿಯೋಗ್ಯ ಅನ್ನಿಸಿರಲಿಲ್ಲ​. ಶುಸ್ಕ, ಒಣಹವೆ ಮತ್ತು ಮಳೆಯ ಕೊರತೆ ಇವೆಲ್ಲವೂ ಕೃಷಿಯನ್ನು ಇನ್ನೂ ದುಸ್ಥರವನ್ನಾಗಿ ಮಾಡಿದ್ದವು. ಇದ್ದ ಅಲ್ಪ ಪ್ರಮಾಣದ ನೀರು ಕೂಡ​ ಲವಣಯುಕ್ತವಾಗಿದ್ದು ಕೃಷಿ ಬಳಕೆಗೆ ಯೋಗ್ಯವೂ ಆಗಿರಲಿಲ್ಲ​.

           ಕೂರತೆ ಎನ್ನುವುದು ಕೇವಲ ಕೊರಗಿಗೆ ಕಾರಣವಾಗದೆ ಅನ್ವೇಶಣೆಗಳಿಗೆ ದಾರಿ ಮಾಡಿಕೊಟ್ಟರೆ ಅದಕ್ಕಿ೦ತ ಇನ್ನೇನು ಬೇಕು. ಇಸ್ರೇಲ್ ನಲ್ಲಿ ಆಗಿದ್ದದು ಅ೦ತಹುದೇ ಬೆಳವಣಿಗೆ​. ಅದರ ಪರಿಣಾಮವೇ ಇ೦ದು ಕೃಷಿ ಕ್ಷೇತ್ರದಲ್ಲಿ ಇಡೀ ಜಗತ್ತೇ ಅದರತ್ತ​   ತಿರುಗಿ ನೋಡುವ​೦ತೆ ಮಾಡಿದೆ. ಕೃಷಿ ಕ್ಷೇತ್ರದಲ್ಲಿ ಮಾಡಿದ ನಿರ​೦ತರ ಸ​೦ಶೋಧನೆಗಳು, ಅದನ್ನು ಅಳವಡಿಸುಕೊಳ್ಳುವಲ್ಲಿ ಜನರು ತೋರಿದ ಆಸಕ್ತಿ ಮತ್ತು ಅಲ್ಲಿನ ಸರಕಾರದ ಬೆ೦ಬಲ ಸ​೦ಬ​೦ಧಿಸಿದ ಕ್ಷೇತ್ರದಲ್ಲಿ ಇಡೀ ದೇಶವನ್ನು ಮು೦ಚೂಣಿಯಲ್ಲಿ ತ​೦ದಿರಿಸಿದೆ.  ಹಾಗೆಯೇ ಇಸ್ರೇಲ್ ಅಳವಡಿಸಿಕೊ೦ಡ ಕೃಷಿ ಪದ್ದತಿ ಅಧ್ಯಯನ ಯೋಗ್ಯವೂ ಎನ್ನಿಸಿದೆ. ಇ೦ದಿನ ಕಾಲಕ್ಕೆ ಇಸ್ರೇಲ್ ಎ೦ಬ ಚಿಕ್ಕ ದೇಶ, ಕೈಯೊಡ್ಡುವ ಸ್ಥಿತಿಯಿ೦ದ ಬೇರೆ ಬೇರೆ ದೇಶಗಳಿಗೆ ಉತ್ತಮ ಗುಣ ಮಟ್ಟದ ಉತ್ಪನ್ನಗಳನ್ನು ರಪ್ತು ಮಾಡುವ ಹ​೦ತಕ್ಕೆ ಬೆಳೆದಿದೆ.

ಇಸ್ರೇಲ್ ಮಾದರಿ ಕೃಷಿಯ ವಿಷೇಶಗಳು:

               ಇಸ್ರೇಲ್ ಕೃಷಿ ವಲಯದಲ್ಲಿ ಅಳವಡಿಸಿಕೊ೦ಡ ನಾವೀನ್ಯತೆ, ವೃತ್ತಿಪರತೆ ಅಧ್ಯಯನ ಯೋಗ್ಯವಾಗಿದೆ. ಅ೦ತೆಯೇ ಇಲ್ಲಿನ ಕೃಷಿ ಪದ್ದತಿ ತನ್ನದೇ ಆದ ವಿಶೇಷತೆಯನ್ನು ಹೊ೦ದಿದೆ.  

ತೋಟಗಾರಿಕಾ ಬೆಳೆಗಳಿಗೆ ಆಧ್ಯತೆ:    ಬೆಳೆಯ ಆಯ್ಕೆಯಲ್ಲಿ ಇಸ್ರೇಲ್ ತನ್ನದೇ ಆದ ವಿಶಿಷ್ಟತೆಯನ್ನು ಹೊ೦ದಿದೆ. ಅದು ಆಹಾರ ಬೆಳೆಗಳಿಗಿ೦ತ ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಒತ್ತನ್ನು ನೀಡಿದೆ. ಇದೊ೦ದು ಕಡಿಮೆ ಸ್ಥಳದಲ್ಲಿ ಹೆಚ್ಚಿನ ಆದಾಯ ತರುವ ವಿಧಾನ​. ತೋಟಗಾರಿಕಾ ಬೆಳೆಗಳಾದ ಹಣ್ಣುಗಳು, ತರಕಾರಿಗಳು, ಹೂ ಗಳು ಇಲ್ಲಿ ನೆಚ್ಚಿನ ಬೆಳೆಗಳು. ಬೆಳೆಗಳ ಆಯ್ಕೆಯೂ ಅಲ್ಲಿನ ಹವಾಗುಣಕ್ಕೆ  ಅನುಗುಣ​ವಾಗಿಯೇ ನಡೆಯುತ್ತವೆ. ಅದರ​ ಮೆಡಿಟರೇನಿಯನ್ ಕರಾವಳಿಯ ತೀರ ಪ್ರದೇಶಗಳು ಅವಕಾಡೋ, ಕೀವಿ, ನಿ೦ಬೆ, ಮಾವು, ಕಿತ್ತಳೆಯ ತೋಟಗಳಿ೦ದ ತು೦ಬಿದ್ದರೆ, ಉಪ ಉಷ್ಣವಲಯದ ಕಣಿವೆಗಳು ಬಾಳೆ ಗಿಡಗಳಿ೦ದ ಕ​೦ಗೊಳಿಸುತ್ತಿರುತ್ತವೆ. ಅತಿ ಶುಷ್ಕ ಮರುಭೂಮಿಗಳು ಕರ್ಜೂರದ ಮರಗಳಿ೦ದ ತು೦ಬಿದ್ದರೆ, ಎತ್ತರದ ಆರ್ದ ಪರ್ವತ ಶ್ರೇಣಿಗಳು ಸೇಬು, ಪಿಯರ್ ಮತ್ತು ವಿವಿಧ ಚೆರಿ ಹಣ್ಣುಗಳಿ೦ದ ತು೦ಬಿರುತ್ತವೆ. ಹೂ ಗಿಡಗಳು, ಮೂಲಿಕೆಗಳು ಮತ್ತು ವಿವಿಧ ತರಕಾರಿಗಳು ಹೆಚ್ಛಾಗಿ ಪಾಲಿ ಹೌಸ್ ಅಥವಾ ಹಸಿರು ಮನೆ ಗಳಲ್ಲಿ ಬೆಳೆಯಲ್ಪಡುತ್ತವೆ. ಇಸ್ರೇಲ್ ಹೂ ಬೆಳೆಯುವಿಕೆಯಲ್ಲಿ ತನ್ನದೇ ಆದ ಚಾಪನ್ನು ಒತ್ತಿದೆ. ರಪ್ತು ಯೋಗ್ಯ ಹೂಗಳಾದ ಗುಲಾಬಿ, ಟುಲಿಪ್ ಲಿಲ್ಲಿ ಗಳನ್ನು ಯತೇಚ್ಚವಾಗಿ ಬೆಳೆಯಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಹೂಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಹಕಾರಿ ಕೃಷಿ:

              ಇಸ್ರೇಲ್ ನ ಕ್ರಾ೦ತಿಕಾರಕ ಅ೦ಶ ವೆ೦ದರೆ ಕೃಷಿ ಒ೦ದು ವೈಯಕ್ತಿಕ ವಿಷಯವಾಗಿರದೆ ಅದು ಸಹಾಕಾರಿ ತತ್ವದ ಮೇಲೆ ಅವಲ೦ಭಿತವಾದದ್ದು. ಇಲ್ಲಿ ಸಣ್ಣ ಸಣ್ಣ ರೈತರು ತಮ್ಮ ಹಿಡುವಳಿಗಳನ್ನು ಒಟ್ಟಾಗಿ ತ​೦ದು ಕೃಷಿಯಲ್ಲಿ ತೊಡಗಿಕೊಳ್ಳುವುದಾಗಿದೆ.

             ಕಿಬುಟ್ಜ್ ಮತ್ತು ಮೊಶೋವ್ ಎನ್ನುವುದು ಎರಡು ರೀತಿಯ ಕೃಷಿ ವಸಾಹತುಗಳಾಗಿದ್ದು, ಇವೆರಡು ತಮ್ಮ ಆಚರಣಾ ವಿಧಾನ ಮತ್ತು ಭೂಮಾಲಿಕತ್ವದ ತತ್ವದಲ್ಲಿ ತನ್ನದೇ ವ್ಯತ್ಯಾಸಗಳನ್ನು ಹೊ೦ದಿದೆ.   ಕಿಬುಟ್ಶ್ ಒ೦ದು ಸಾಮಾಜಿಕ ತತ್ವದ ಮೇಲೆ ಅವಲ​೦ಬಿತವಾದ, ಸಾಮೂಹಿಕ ಭೂಮಾಲಿಕತ್ವಕ್ಕೆ ಹೆಸರಾದ ಒ೦ದು ವ್ಯವಸ್ಥೆ.   ಇಲ್ಲಿ ಎಲ್ಲಾ ಖರ್ಚು ವೆಚ್ಛ ಗಳು ಮತ್ತು ಬರುವ ಆದಾಯವೂ ಕೂಡ ಸಮನಾಗಿ ಹ​೦ಚಿಕೆಯಾಗುತ್ತವೆ.    ಇಲ್ಲಿ ಸದಸ್ಯರೆಲ್ಲರು ದೈನ​೦ದಿನ ಚಟುವಟಿಕೆಗಳಲ್ಲಿ ಒಟ್ಟಾಗಿದ್ದು ಸಹಜೀವನಕ್ಕೆ ಒತ್ತು ಕೊಡುತ್ತಾರೆ.   ಆದರೆ ಇತ್ತೀಚಿನ ದಿನಗಳಲ್ಲಿ ಕಿಬುತ್ಜ್ ನಲ್ಲಿ ಸದಸ್ಯರ ಭಾಗವಹಿಸುವಿಕೆ ಕಡಿಮೆಯಾಗಿದ್ದು, ಹೆಚ್ಚಿನವರು ಸ್ವಾವಲ​೦ಭಿ ಕೃಷಿ ಮತ್ತು ಕೌಟು೦ಭಿಕ ಜೀವನ ನಡೆಸುತ್ತಿದ್ದಾರೆ.

         ಮೊಶಾವ್ ಎನ್ನುವುದು ಭಾಗಶಃ ಸಹಕಾರಿ ತತ್ವವನ್ನು ಅಳವಡಿಸಿಕೊ೦ಡು ಸಾಗುತ್ತದೆ. ಇಲ್ಲಿ ಭೂಮಾಲಿಕತ್ವ ಮತ್ತು ಕೃಷಿಯಲ್ಲಿ ತೊಡಗಿಕೊಳ್ಳುವುದು ಎರಡೂ ವೈಯಕ್ತಿಕ ವಾಗಿದ್ದು, ಕೆಲವು ವಿಷಯಗಳಲ್ಲಿ ಮಾತ್ರ ಸಹಕಾರ ವಿರುತ್ತದೆ.   ದೊಡ್ಡ ಯ​೦ತ್ರ ಮತ್ತು ಸಲಕರಣೆಗಳನ್ನು ಹೊ೦ದುವುದು, ಕೃಷಿ ಉತ್ಪನ್ನಗಳ ವಿನಿಮಯ ದ​೦ತಹ ಸಣ್ಣ ಮಟ್ಟದ ಸಹಕಾರ ಇಲ್ಲಿ ಕಾಣಸಿಗುತ್ತದೆ.   

ಸರಕಾರದ ಬೆ೦ಬಲ:​

               ಇಸ್ರೇಲ್ ನಲ್ಲಿ ರೈತರು ಹೆಚ್ಚು ಗೌರವಾನ್ವಿತ ಬದುಕನ್ನು ಬದುಕುತ್ತಾರೆ. ಸರಕಾರದಿ೦ದ ಅವರಿಗೆ ಎಲ್ಲಾ ತರಹದ ಬೆ೦ಬಲವು ನಿರ​೦ತರವಾಗಿ ಸಿಗುತ್ತದೆ.  ಸ​೦ಭ​೦ಧಿಸಿದ ಯಾವುದೇ ವಿಜ್ಞಾನಿ, ತಂತ್ರಜ್ಞರ   ಸ​೦ವಹವನವೂ ಸುಲಭಸಾಧ್ಯವೂ, ನಿರ​​೦ತರವೂ, ಸುಲಲಿತವೂ ಆಗಿರುತ್ತದೆ.   ಅನೇಕ ವಿಷಯಗಳಲ್ಲಿ ಅ೦ದರೆ ಹೆಚ್ಚಾಗಿ ಹೆಚ್ಚು ಬೆಲೆಯ ಯ​೦ತ್ರೋಪಕರಣದ ಖರೀದಿಯಲ್ಲಿ ಶೇ.40 ರಷ್ಟು ಸಹಾಯಧನ ಸರಕಾರದಿ೦ದ ಕೊಡಮಾಡಲ್ಪಡುತ್ತದೆ.  ನೀರಿನ ನಿರ್ವಹಣೆ, ಬೆಳೆ ವಿಜ್ಞಾನ ಮತ್ತು ರಫ್ತು-ಆಧಾರಿತ ಕೃಷಿಯಲ್ಲಿ ನಾವೀನ್ಯತೆಯ ಮೇಲೆ ಕೇಂದ್ರೀಕರಿಸುವುದು ಮು೦ತಾದವುಗಳು ಸರಕಾರದ ಮೂಲ ಆಶಯವಾಗಿರುತ್ತದೆ. ಇದರಲ್ಲಿ ವೋಲ್ಕಾನಿ ಸೆಂಟರ್‌ನಂತಹ ಸಂಶೋಧನಾ ಸಂಸ್ಥೆಗಳಲ್ಲಿ ನೇರ ಹೂಡಿಕೆ, ಹೊಸ ರೈತ ನಿಧಿಯಂತಹ ಉಪಕ್ರಮಗಳ ಮೂಲಕ ಸಾಲಗಳನ್ನು ಒದಗಿಸುವುದು ಮತ್ತು ಕೇಂದ್ರ ಯೋಜನೆಯನ್ನು ಕಡಿಮೆ ಮಾಡಲು ಮತ್ತು ವಿಮಾ ಸಬ್ಸಿಡಿಗಳನ್ನು ಹೆಚ್ಚಿಸಲು ನೀತಿ ಬದಲಾವಣೆಗಳನ್ನು ಜಾರಿಗೆ ತರುವಲ್ಲಿ ಸಕ್ರಿಯವಾಗಿವೆ.

              ಇನ್ನೊ೦ದು ಗಮನಿಸಬೇಕಾದ ಅ೦ಶವೆ೦ದರೆ, ಕೃಷಿಮಾಹಿತಿಗಳ ಸಂವಹನ ಏಕಮುಖವಾಗಿರದೆ, ಹೊಸ ಕೃಷಿ ತಂತ್ರಜ್ಞಾನದ ಅಳವಡಿಕೆ, ಅದರ ತಪ್ಪು ಒಪ್ಪುಗಳು ನಿರ​೦ತರವಾಗಿ ಸಂಬಂಧಿತ ಅಧಿಕಾರಿಗಳು, ತಂತ್ರಜ್ಞರು, ವಿಜ್ಞಾನಿಗಳಿಗೆ ಕೃಷಿನಿರತರಿ೦ದ ರವಾನೆಯಾಗುತ್ತಿರುತ್ತವೆ. ಇದು ತಂತ್ರಜ್ಞಾನದ ನಿರ​೦ತರ ಪ್ರಗತಿಗೆ ಎಡೆಮಾಡಿಕೊತ್ತಿದೆ. ಹೊಸ ತಂತ್ರಜ್ಞಾನದ ಮತ್ತು ಮಾದರಿಯನ್ನು ಅನ್ವೇಶಿಸುವುದರಲ್ಲಿ ಸರಕಾರ ಮತ್ತು ವಿಜ್ಞಾನಿಗಳು ಆಸ್ಥೆ ಒ೦ದು ಕಡೆಯಾದರೆ, ಅದಕ್ಕೆ ಸಮನಾದ ಆಸ್ಥೆಯನ್ನು ಅವುಗಳನ್ನು ಅಳವಡಿಸುಕೊಳ್ಳುವಲ್ಲಿ ಕೃಷಿನಿರತರು ತೋರುತ್ತಾರೆ.

ಹನಿ ನೀರಾವರಿಯ ಉಗಮ​:

          ಜಾಗತಿಕ ಕೃಷಿಗೆ ಇಸ್ರೇಲ್ ನೀಡಿದ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಹನಿ ನೀರಾವರಿ ತಂತ್ರಜ್ಞಾನವೂ ಒಂದು. ಇದನ್ನು 1960 ರ ದಶಕದಲ್ಲಿ ಇಸ್ರೇಲಿ ಎಂಜಿನಿಯರ್ ಸಿಂಚಾ ಬ್ಲಾಸ್ ಎನ್ನುವವರು ಮೊದಲು ಪರಿಚಯಿಸಿದರು. ಸಸ್ಯದ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸಲು  ನೀರನ್ನು ಪರಿಣಾಮಕಾರಿ ಬಳಕೆಗೆ ಸಹಾಯ ಮಾಡುತ್ತದೆ.     ಇದು ಅತ್ಯ೦ತ ಶುಷ್ಕ ಒಣಹವೆಯ,  ನೀರಿನ ಅಲಭ್ಯತೆಯ   ಸಮಸ್ಯೆಯ   ನಡುವೆಯೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಸಕ್ರಿಯಗೊಳಿಸಿತು. ನೀರಿಲ್ಲದೆ ಬೆ೦ಗಾಡಾದ ಮತ್ತು ಉಪಯುಕ್ತ ವಲ್ಲದ ಉಪ್ಪು ನೀರಿನಿ೦ದ ಕೂಡಿದ ಇಸ್ರೇಲಿನಲ್ಲಿ ನೀರಿನ ಸದ್ಬಳಕೆಯೇ ಮುಖ್ಯ ಕಾರಣ​.   ನೀರಿನ ನಿರ್ವಹಣೆಯಲ್ಲಿ ದಕ್ಷತೆಸಾಧಿಸಿರುವುದು, ನೀರಾವರಿಗಾಗಿ ಹನಿ ನೀರಾವರಿಯನ್ನಷ್ಟೆ ಉಪಯೋಗಿಸುವುದು, ಹನಿ ನೀರಾವರಿಯ ಜೊತೆಗೆ ಸೂಕ್ಷ್ಮ ಪೋಷಕಾಂಶಗಳನ್ನು ಗಿಡಗಳಿಗೆ ತಪ್ಪದೇ ಒದಗಿಸುವುದು ಇಲ್ಲಿ ಗಮನಿಸಬೇಕಾದ ಅ೦ಶ​.  

            ಇಸ್ರೇಲ್ ಮೀನು ಸಾಕಾಣಿಕೆಯಲ್ಲೇನು ಹಿ೦ದೆ ಬಿದ್ದಿಲ್ಲ​.   ಹೆಚ್ಚು ಆದಾಯ ತರುವ, ಉತ್ತಮ ಗುಣಮಟ್ಟದ ಮತ್ತು ರಪ್ತು ಯೋಗ್ಯ ಮೀನು ಸಾಕಾಣಿಕೆಯಲ್ಲಿ ತನ್ನದೇ ಆದ ಪಾರಮ್ಯವನ್ನು ಸಾಧಿಸಿದೆ. ಹೆಚ್ಚು ಹೆಚ್ಚು ಆದಾಯ ತರುವ ಅಪರೂಪದ ಮತ್ತು ಬಣ್ಣ ಬಣ್ಣದ ಅಲ೦ಕಾರಿಕಾ ಮೀನು ಸಾಕಾಣಿಕೆಯಲ್ಲಿ  ಇಸ್ರೇಲ್    ಪಳಗಿದೆ.

      

    ಕೃಷಿಯಲ್ಲಿ ಹಸಿರು ಮನೆಯ ಬಳಕೆ:

         ಫಲವತ್ತಲ್ಲದ​ ಮಣ್ಣು, ಪ್ರತಿಕೂಲ​ ಹವಾಮಾನ ಮತ್ತು ನೀರಿನ ಅಲಭ್ಯತೆ ಇಸ್ರೇಲ್ ನ್ನು ಹಸಿರು ಮನೆಯ ಬಳಕೆಯತ್ತ ಮುಖಮಾಡುವ​೦ತೆ ಮಾಡಿತು. ಇಲ್ಲಿ ಅರ್ದ್ರತೆ, ಉಷ್ಣಾ೦ಶ ಬೆಳೆಗೆ ಬೇಕಾದ​೦ತೆ ನಿಯ೦ತ್ರಿಸಿ ಎಲ್ಲಾಕಾಲದಲ್ಲಿಯೂ ಹಸಿರು ಸಸ್ಯಗಳನ್ನು ಬೆಳೆಯಲು ಅನುವು ಮಾಡಿಕೊಟ್ಟಿತು. ಅಲ್ಲಿ ಬೆಳೆದ ಬೆಳೆಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಇಳುವರಿ ಕೊಡುವ ಮತ್ತು ರಪ್ತುಯೋಗ್ಯ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗ ಳು  ಆಗಿರುತ್ತವೆ. ಹೆಚ್ಚಾಗಿ ತರಕಾರಿಗಳು, ಹೂ ಗಿಡಗಳನ್ನು ಇಲ್ಲಿ ಹೆಚ್ಚುಹೆಚ್ಛಾಗಿ ಬೆಳೆಯಲಾಯಿತು. ಅದಕ್ಕಾಗಿಯೋ ಏನೋ ಇಸ್ರೇಲ್ ನಿ೦ದ ಕೃಷಿ ಉತ್ಪನ್ನಗ ಳು ಹೆಚ್ಚು ರಪ್ತಾಗುವುದು ಗುಣ ಮಟ್ಟಕ್ಕೆ ಒತ್ತು ನೀಡುವ ಯುರೊಪಿಯನ್ ದೇಶಗಳಿಗೆ.

   ಹೈನುಗಾರಿಕೆಯಲ್ಲಿ ಮೇಲುಗೈ:

                ಕೃಷಿಯ ಒ೦ದು ಭಾಗವಾದ ಪಶುಸ​೦ಗೋಪನೆಯಲ್ಲಿಯೂ ಇಸ್ರೇಲ್ ತನ್ನದೇ ಆದ ಪ್ರಗತಿ ಸಾಧಿಸಿದೆ.  ಹೊಸತನ​, ಸ​೦ಶೋದನೆ ಮತ್ತು ಅದರ ಅಳವಡಿಕೆ ಮತ್ತು ಹೆಚ್ಚಿನ ದಕ್ಷತೆಯ  ಕಾರಣಕ್ಕಾಗಿ,   ಹೈನು ಉದ್ಯಮದಲ್ಲಿ ಇ೦ದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವ​೦ತೆ ಮಾಡಿದೆ.  ಇಲ್ಲಿ ಹೈನುಗಾರರು ಹಸುಗಳ ಚಟುವಟಿಕೆ, ಆರೋಗ್ಯ ಮತ್ತು ಸ​೦ತಾನೋತ್ಪತ್ತಿ ಚಕ್ರಗಳನ್ನು ಮೇಲ್ವಿಚಾರಣೆ ನಡೆಸಲು ಮೈಕ್ರೋಚಿಪ್ ಗಳನ್ನು ಆಳವಡಿಸುತ್ತಾರೆ. ಇದು ಸಮಸ್ಯೆ ಗಳನ್ನು ಮೊದಲೇ ತಿಳಿದುಕೊಳ್ಳಲು ಮತ್ತು ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಹಾಯಮಾಡುತ್ತದೆ.   ಅತಿಯಾದ ತಾಪಮಾನದಿ೦ದ ಬರುವ ಸಮಸ್ಯೆಗಳನ್ನು ನಿವಾರಿಸಲು ಜಾನುವಾರುಗಳನ್ನು ಹವಾನಿಯ​೦ತ್ರಿತ ಶೆಡ್ ಗಳಲ್ಲಿ ಇರಿಸಲಾಗುತ್ತದೆ.  

ಸಮರ್ಥ ನೀರು ನಿರ್ವಹಣಾ ಪದ್ದತಿ:

         ನೀರಿನ ಕೊರತೆ ಇಸ್ರೇಲ್ ನಲ್ಲಿ ನೀರು ನಿರ್ವಹಣಾ ವಲಯದಲ್ಲಿ ಅನೇಕ ಪ್ರಗತಿಗೆ ಕಾರಣವಾಗಿದೆ. ಇಲ್ಲಿ ಇದ್ದ ನೀರನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವುದು. ಹನಿ ನೀರಾವರಿ ಪದ್ದತಿ ಇಲ್ಲಿ ವರವಾಗಿ ಪರಿಣಮಿಸಿತ್ತು. ನೀರಿನ ಮರುಬಳಕೆಯಲ್ಲೂ ಇಸ್ರೇಲ್ ಮಹತ್ತರ ಪ್ರಗತಿಯನ್ನು ಸಾಧಿಸಿತು.  ಇ೦ದು ಇಸ್ರೇಲ್ ಶೇ. 90  ರಷ್ಟು ನೀರನ್ನು ಮರು ಬಳಕೆ ಮಾಡಿಕೊಳ್ಳುತ್ತಿದೆ.  ಲವಣಯುಕ್ತ ಸಮುದ್ರ ನೀರನ್ನು ಕೃಷಿಯೋಗ್ಯವಾಗಿ ಮಾಡುವಲ್ಲಿಯೂ ಇಸ್ರೇಲ್ ಹಿ೦ದೆ ಬಿದ್ದಿಲ್ಲ​.

    ಕೃಷಿ ಪ್ರವಾಸೋದ್ಯಮ:

                 ಇಸ್ರೇಲ್ ಕೃಷಿ ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿದೆ. ಇಲ್ಲಿನ ಕೃಷಿ ಸಾ೦ಪ್ರದಾಯಿಕ ಮತ್ತು ಆದುನಿಕ ಅನ್ವೇಷಣೆಗಳ ಸಮ್ಮಿಲನವಾಗಿದೆ. ಇಲ್ಲಿ ದೇಶ ವಿದೇಗಳ ಪ್ರವಾಸಿಗರು, ಅಧ್ಯಯನಾಸಕ್ತರು ಬೇಟಿ ನೀಡುತ್ತಾರೆ. ಅಲ್ಲಿ ಅವರಿಗೆ ತ​೦ಗಲು ಬೇಕಾದ ವ್ಯವಸ್ಥೆಗಳು , ಕೃಷಿಯ ಬಗ್ಗೆ ಮಾಹಿತಿ ನೀಡುವ ಮಾರ್ಗದರ್ಶಕರು ಸಿಗುತ್ತಾರೆ. ಇದು ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಅನುವಾಗಿದೆ. ಇಲ್ಲಿ ಪ್ರವಾಸಿಗರು ಬರಡು ಬ​೦ಜರಾಗಿದ್ದ ಮರುಭೂಮಿಯ​೦ತಹ ನೆಲವನ್ನು ಹಸಿರಿನಿ೦ದ ಹೇಗೆ ನಳನಳಿಸುವ​೦ತೆ ಮಾಡಬಹುದು ಎ೦ದು ಕಣ್ತು೦ಬಿಕೊಳ್ಳಬಹುದು.