ಹವಾಮಾನದ ಬದಲಾವಣೆ ಮತ್ತು ಕೃಷಿ
Blog post description.
GENERAL
3/28/20251 min read


ಹವಾಮಾನದ ಬದಲಾವಣೆ ಮತ್ತು ಕೃಷಿ
ಹವಾಮಾನ ಮತ್ತು ಅದರ ಬದಲಾವಣೆ
ಹವಾಮಾನವೆ೦ದರೆ ಒ೦ದು ನಿರ್ದಿಷ್ಟ ಪ್ರದೇಶದಲ್ಲಿ ದೀರ್ಘಾವಧಿಯಲ್ಲಿ ಪ್ರಚಲಿತವಿರುವ ತಾಪಮಾನ, ಆರ್ದ್ರತೆ, ಮಳೆಯ ಮಾದರಿ ಮತ್ತು ಪ್ರಮಾಣ ಮು೦ತಾದವುಗಳನ್ನು ಒಳಗೊ೦ಡ ಒ೦ದು ಸಂಕೀರ್ಣ ವಿದ್ಯಮಾನ ವಾಗಿರುತ್ತದೆ. ಈ ಎಲ್ಲವೂ ಋತುಮಾನಕ್ಕೆ ತಕ್ಕ೦ತೆ ಬದಲಾಗುತ್ತವೆಯಾದರೂ, ಬದಲಾವಣೆಗಳು ಒ೦ದೇ ತೆರನಾಗಿರುತ್ತವೆ. ಅ೦ದರೆ ಮಳೆಗಾಲದ ಆಗಮನ, ಆಗುವ ಮಳೆಯ ಪ್ರಮಾಣ, ಚಳಿಗಾಲದ ತಾಪಮಾನದಲ್ಲಿನ ಇಳಿಕೆ, ಬೇಸಿಗೆಯ ಬಿಸಿಲು ಇತ್ಯಾದಿಗಳು ದೀರ್ಘಾವಧಿಯಲ್ಲಿ ಸ್ಥಿರವಾಗಿಯೇ ಇರುತ್ತದೆ.
ಈ ಸ್ಥಿರವಾಗಿರುವ ಹವಾಮಾನದದಲ್ಲಿ ಕ್ರಮೇಣ ಏರಿಳಿತಗಳು ಕ೦ಡಲ್ಲಿ ಅದನ್ನು ಹವಾಮಾನದ ಬದಲಾವಣೆ ಎ೦ದು ಪರಿಗಣಿಸಲಾಗುತ್ತದೆ. ಈ ಏರಿಳಿತಗಳೂ ಕೂಡ ದೀರ್ಘಾವಧಿಯದ್ದೇ ಆಗಿರಬೇಕಾಗುತ್ತದೆ. ಈ ಹವಾಮಾನದ ಬದಲಾವಣೆಯು ಕೇವಲ ಸಾಮಾನ್ಯ ವಿಷಯವಾಗಿರದೆ ಮನುಕುಲದ ಮೇಲೆ ಅಪಾರ ಪ್ರಮಾಣದ ಹಾನಿಯನ್ನು೦ಟುಮಾಡಬಹುದು. ಅದಕ್ಕಾಗಿಯೇ ಇದು ಪ್ರಚಲಿತ ವಿಶ್ವವ್ಯಾಪಿ ಬಹುಚರ್ಚಿತ ವಿದ್ಯಮಾನವಾಗಿದೆ. ತಾಪಮನದ ಕ್ರಮೇಣ ಏರಿಕೆ, ಧ್ರುವ ಪ್ರದೇಶದ ಮ೦ಜುಗಡ್ಡೆಯ ನಿದಾನಗತಿಯ ಕರಗುವಿಕೆ, ಕರಗಿ ಸಮುದ್ರಕ್ಕೆ ಸೇರುವಿಕೆ, ಸಮುದ್ರಮಟ್ಟದ ಏರುವಿಕೆ, ಜೊತೆಗೆ ಸಮುದ್ರದ ಮೆಲ್ಮೈ ತಾಪಮಾನದ ಏರುವಿಕೆ, ಸಮುದ್ರದ ನೀರಿನ ಆಮ್ಲೀಕರಣ ಇವೆಲ್ಲವೂ ಒಟ್ಟಾರೆಯಾಗಿ ಆದ ಮತ್ತು ಆಗುತ್ತಿರುವ ಬದಲಾವಣೆಗಳಾದರೆ, ನಿರ್ದಿಷ್ಟವಾಗಿ ಕೃಷಿವಲಯದಲ್ಲಿ ತನ್ನದೇ ಆದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಹವಾಮಾನ ಬದಲಾವಣೆಯ ಕುರಿತಾದ ಅಂತರ ಸರ್ಕಾರಿ ಸಮಿತಿ (ಐ.ಪಿ.ಸಿ.ಸಿ) (Intergovernmental Panel on Climate Change. It is the United Nations body for assessing the science related to climate change) ಯ ವರಧಿಯ ಪ್ರಕಾರ ಮು೦ದಿನ ಎರಡು ದಶಕಗಳಲ್ಲಿ ಸರಾಸರಿ ಜಾಗತಿಕ ತಾಪಮಾನವು 1.5°C ನಷ್ಟು ಹೆಚ್ಚಾಗಬಹುದು ಎ೦ದು ಅ೦ದಾಜಿಸಲಾಗಿದೆ. ಇದೇ ರೀತಿ ಗ್ರೀನ್ ಹೌಸ್ ಅನಿನಗಳ ಬಿಡುಗಡೇ ಮತ್ತು ಪರಿಸರ ಮಾಲಿನ್ಯ ಪ್ರಸ್ತುತ ರೀತಿಯಲ್ಲಿಯೇ ಮು೦ದುವರಿದಲ್ಲಿ 2100 ನೇ ಇಸವಿಯ ಹೊತ್ತಿಗೆ ಸಮುದ್ರ ಮಟ್ಟ ಒ೦ದು ಮೀಟರ್ ನಷ್ಟು ಹೆಚ್ಚಬಹುದು ಎ೦ದು ಅ೦ದಾಜಿಸಲಾಗಿದೆ.
ಹೀಗೆ ಮನುಷ್ಯನ ಉಳಿವಿಗೇ ಮಾರಕವಾಗಿರುವ ಹವಾಮಾನದಲ್ಲಿ ಕ೦ಡುಬರುತ್ತಿರುವ ಬದಲಾವಣೆಯು ಮನುಷ್ಯ ನಿರ್ಮಿತವೇ ಆಗಿರುತ್ತವೆ. ಪ್ರಕೃತಿಯ ಮಡಿಲಿನ ಮಗುವಾಗಬೇಕಿದ್ದ ಮನುಷ್ಯ, ತನ್ನ ದುರಾಸೆಗಾಗಿ ಅದಕ್ಕೆ ಮಾರಕವಾಗುವ೦ತಹ ಚಟುವಟಿಕೆಗಳಲ್ಲಿ ತಲ್ಲೀನನಾಗಿದ್ದು, ಅದರಲ್ಲಿಯೂ ಅರಣ್ಯನಾಶ, ಹಸಿರುಮನೆ ಅನಿಲಗಳು ವಾತಾವರಣಕ್ಕೆ ಯತೇಚ್ಛವಾಗಿ ಬಿಡುಗಡೆಗೊಳಿಸುವ ಕೈಗಾರಿಕೆಗಳು ಅದರ ಉತ್ಪನ್ನಗಳ ಬಳಕೆ ಇವೆಲ್ಲವೂ ಹವಾಮಾನ ಬದಲಾವಣೆಗೆ ಬಹುಮುಖ್ಯ ಕಾರಣಗಳಾಗಿವೆ. ಹಾಗೆ ನೋಡಿದರೆ ಕೃಷಿಯೂ ಕೂಡ ಹವಾಮಾನ ಬದಲಾವಣೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಒ೦ದು ಅ೦ದಾಜಿನ ಪ್ರಕಾರ ಪ್ರಪ೦ಚದ ಒಟ್ಟು ಶೇ. 18.4 ಗೀನ್ ಹೌಸ್ ಅನಿಲ ಪರಿಸರದ ಬಿಡುಗಡೆಗೆ ಕೃಷಿಯೇ ಕಾರಣವಾಗಿರುತ್ತದೆ. ಇದು ವಿಶ್ವಾದ್ಯಂತ ಹಸಿರುಮನೆ ಅನಿಲ (GHG) ಹೊರಸೂಸುವಿಕೆಯಲ್ಲಿ ಸರಿಸುಮಾರು 20% ರಷ್ಟು ಪಾಲನ್ನು ಹೊಂದಿದೆ. ಜಾಗತಿಕವಾಗಿ, ಒ೦ದು ಪ್ರಬಲ ಹಸಿರು ಮನೆ ಅನಿಲವಾದ ಮೀತೇನ್ ನ ಓಟ್ಟು ಹೊರಸೂಸುವಿಕೆಯಲ್ಲಿ ಶೇ. 45 ರಷ್ಟು ಪಾಲು ಕೃಷಿಯದ್ದೇ ಆಗಿರುತ್ತದೆ. ಮೀತೆನ್ ಅತಿಯಾದ ಭತ್ತ ಮತ್ತು ಗೋದಿ ಬೆಳೆಯುವಿಕೆಯಿ೦ದ, ಜಾನುವಾರುಗಳ ತ್ಯಾಜ್ಯದಿ೦ದ ಪರಿಸರಕ್ಕೆ ಬಿಡುಗಡೆಯಾಗುತ್ತದೆ.
ನೈಟ್ರಸ್ ಒಕ್ಸೈಡ್ ಕೂಡ ಪರಿಸರಕ್ಕೆ ಬಿಡುಗಡೆಯಾಗುವ ಮತ್ತೊ೦ದು ಹಸಿರು ಮನೆ ಅನಿಲವಾಗಿದ್ದು, ರಸಗೊಬ್ಬರಗಳ ಅತಿಯಾದ ಬಳಕೆಯಿ೦ದ ಬಿಡುಗಡೆ ಯಾಗುತ್ತದೆ. ಒಟ್ಟು ನೈಟ್ರಸ್ ಆಕ್ಸೈಡ್ ಹೊರಸೂಸುವಿಕೆಯಲ್ಲಿ 74% ಕೊಡುಗೆ ಕೃಷಿಯದ್ದಾಗಿರುತ್ತದೆ. ಕೃಷಿಗೆ ಅಂತರ್ಜಲದ ಅತಿಯಾದ ಬಳಕೆ ಮತ್ತು ಕೃಷಿ ರಾಸಾಯನಿಕಗಳ ಅತಿಯಾದ ಬಳಕೆಯೂ ಪರಿಸರ ನಾಶಕ್ಕೆ ಕಾರಣವಾಗಿದೆ.
ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು
ಹವಾಮಾನ ಮತ್ತು ಕೃಷಿ ಅವಿನಾಭಾವ ಸ೦ಭದ ಹೊ೦ದಿರುವ ಎರಡು ವಿಷಯಗಳು. ಒ೦ದು ಪ್ರಾ೦ತ್ಯ ಅಥವಾ ಪ್ರದೇಶದಲ್ಲಿ ಬೆಳೆಯಬೇಕಾದ ಬೆಳೆಗಳನ್ನು ನಿರ್ಧರಿಸಬೇಕಾಗಿರುವುದು ಅಲ್ಲಿನ ಹವಾಗುಣದಿ೦ದ. ಅ೦ತೆಯೇ ಅಲ್ಲಿನ ಜನರ ಆಹಾರ ಕ್ರಮವೂ ನಿರ್ಧರಿಸಲ್ಪಡುತ್ತದೆ. ಮು೦ದುವರಿದು, ಆಯಾ ಪ್ರದೇಶದ, ಬಹುಮುಖ್ಯವಾಗಿ ಗ್ರಾಮೀಣ ಭಾಗದ ಅರ್ಥಿಕತೆಯಲ್ಲಿಯೂ ಕೃಷಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಿರುವಾಗ ಹವಾಗುಣದಲ್ಲಿ ಆಗುವ ಬದಲಾವಣೆಯೂ ಅನೇಕ ವಿಧದಲ್ಲಿ ಅನಾಹುತಕಾರಿ ಪರಿಣಾಮಗಳಿಗೆ ಕಾರಣವಾಗುತ್ತದೆ. ಅವುಗಳಲ್ಲಿ ಇಳುವರಿ ಮತ್ತು ಗುಣಮಟ್ಟದಲ್ಲಿ ಕುಸಿತ ಪ್ರಮುಖ ಪರಿಣಾಮವಾಗಿದ್ದು ಜಗತ್ತಿನ ಓಟ್ಟು ಆಹಾರ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯ ಗುರಿಯನ್ನೇ ಬದಿಗಿರಿಸುವ೦ತೆ ಮಾಡಿದೆ.
ಇಳುವರಿಯ ಕುಸಿತ: ಹವಾಮಾನದ ಬದಲಾವಣೆಯಿ೦ದ ಉಷ್ಣಾ೦ಶ, ಆರ್ದ್ರತೆ, ಮಣ್ಣಿನಲ್ಲಿಯ ತೇವಾ೦ಶದ ಪ್ರಮಾಣ ಇವೆಲ್ಲವೂ ಬದಲಾವಣೆಗೊ೦ಡು ಬೆಳೆದ ಬೆಳೆ ಇವಕ್ಕೆಲ್ಲ ಹೊ೦ದಿಕೊಳ್ಳದೇ ಇರಬಹುದು. ಇದು ಮು೦ದೆ ಒಟ್ಟಾರೆ ಇಳುವರಿಯ ಕುಸಿತಕ್ಕೆ ಕಾರಣವಾಗಬಹುದು. ಕೇವಲ ಇಳುವರಿಯ ಕುಸಿತವಲ್ಲದೆ ಗುಣಮಟ್ಟದ ಕುಸಿತವೂ ನಿರೀಕ್ಷಿಸಲಾಗಿದೆ. ತಾಪಮಾನ ಏರಿಕೆಯು ಬೆಳೆ ಬೆಳೆಯುವ ಅವಧಿಯನ್ನು ಕಡಿಮೆ ಮಾಡಿದೆ ಮತ್ತು ಬೆಳೆಯಿ೦ದ ನೀರಿನ ಅತಿಯಾದ ಆವಿಯಾಗುವಿಕೆಯಿ೦ದ (Evapotranspiration), ಅಂತಿಮವಾಗಿ ಗೋಧಿ ಇಳುವರಿಯನ್ನು ಕಡಿಮೆ ಮಾಡಿದೆ (ಆಜಾದ್ ಮತ್ತು ಇತರರು, 2018). ಏಷ್ಯಾದ ಅನೇಕ ಭಾಗಗಳಲ್ಲಿ, ಕಳೆದ ದಶಕಗಳಲ್ಲಿ ಸಕಾಲಿಕ ನೀರು ಮತ್ತು ಮಳೆಯ ಲಭ್ಯತೆಯಲ್ಲಿನ ಇಳಿಕೆ ಮತ್ತು ಅನಿಯಮಿತ ಮತ್ತು ತೀವ್ರವಾದ ಮಳೆಯ ಮಾದರಿಗಳಿ೦ದ ಬೆಳೆ ಉತ್ಪಾದಕತೆಯಲ್ಲಿ ಗಮನಾರ್ಹ ಇಳಿಕೆಯು (ಹುಸೇನ್ ಮತ್ತು ಇತರರು, 2018; ಆರ್ಯಲ್ ಮತ್ತು ಇತರರು, 2019). ದೀರ್ಘಕಾಲದವರೆಗೆ ಹೆಚ್ಚಿನ ತಾಪಮಾನ ಹಾಗೂ ನೀರಿನ ಕೊರತೆಯು ಬೀಜ ಮೊಳಕೆಯೊಡೆಯುವುದನ್ನು ಕಡಿಮೆ ಮಾಡುತ್ತದೆ, ಇದು ಕಳಪೆ ಮತ್ತು ಚೈತನ್ಯರಹಿತ ಸಸಿಗಳಿಗೆ ಕಾರಣವಾಗುತ್ತದೆ (ಫಹಾದ್ ಮತ್ತು ಇತರರು, 2017; ಲಿಯು ಮತ್ತು ಇತರರು, 2019).
ಹವಾಮಾನದ ಬದಲಾವಣೆಯ ಪರಿಣಾಮಗಳು ಕೇವಲ ಕೃಷಿಗಷ್ಟೇ ಸೀಮಿತವಾಗಿರದೆ, ಉಪ ಕಸುಬಾದ ಜಾನುವಾರು ಸಾಕಾಣಿಕೆಯಲ್ಲೂ ತೀವ್ರ ತರಹದ ಹಾನಿಗೆ ಕಾರಣವಾಗಿದೆ. ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ, ಜಾನುವಾರು ವಲಯವು ಹೆಚ್ಚಿದ ತಾಪಮಾನ ಮತ್ತು ಕಡಿಮೆ ಮಳೆಯ ಹಾನಿಗೆ ಹೆಚ್ಚು ಒಳಗಾಗುತ್ತದೆ (ಡೌನಿಂಗ್ ಮತ್ತು ಇತರರು, 2017; ಬಾಲಮುರುಗನ್ ಮತ್ತು ಇತರರು, 2018). ಹವಾಮಾನ ವೈಪರೀತ್ಯವು ಜಾನುವಾರುಗಳಲ್ಲಿ ಹಲವಾರು ರೋಗಗಳ ಸಂಭವ ಮತ್ತು ಪ್ರಸರಣದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಮಳೆಯ ಹೆಚ್ಚಳದಿಂದಾಗಿ ಕುರಿ, ಮೇಕೆ, ದನ, ಎಮ್ಮೆ ಮತ್ತು ಒಂಟೆಗಳಲ್ಲಿ ರಿಫ್ಟ್ ವ್ಯಾಲಿ ಜ್ವರ (RVF) ಮತ್ತು ತಾಪಮಾನ ಏರಿಕೆಯಿಂದಾಗಿ ಉಣ್ಣೆಯಿ೦ದ ಹರಡುವ ರೋಗಗಳು (Tick Born Diseases) ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ (ಬೆಟ್ ಮತ್ತು ಇತರರು, 2019). ಭಾರತದ೦ತಹ ದೇಶಗಳಲ್ಲಿ ಹೆಚ್ಚಿದ ಉಷ್ಣತೆಯು ಪ್ರಾಣಿಗಳ ಸಂತಾನೋತ್ಪತ್ತಿ ಗುಣಲಕ್ಷಣಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಮತ್ತು ಅಂತಿಮವಾಗಿ ಕೋಳಿಗಳ ಕಳಪೆ ಬೆಳವಣಿಗೆ ಮತ್ತು ಅವುಗಳು ಹೆಚ್ಚು ಹೆಚ್ಚು ಸಾಯುವಿಕೆಗೆ ಕಾರಣವಾಗಿದೆ (ಬಾಲಮುರುಗನ್ ಮತ್ತು ಇತರರು, 2018; ಚೆನ್ ಮತ್ತು ಇತರರು, 2021; ವ್ಯಾನ್ ವೆಟ್ಟೆರೆ ಮತ್ತು ಇತರರು, 2021). ವಾತಾವರಣದಲ್ಲಿ ಹೆಚ್ಚಿದ ಕಾರ್ಬನ್ ಡೈ ಆಕ್ಸೈಡ್ ನ ಸಾ೦ದ್ರತೆಯು, ಮೇವಿನ ಗುಣಮಟ್ಟದಲ್ಲಿ, ಅದರಲ್ಲಿಯೂ ಪ್ರೋಟೀನ್, ಕಬ್ಬಿಣ, ಸತು ಮತ್ತು ವಿಟಮಿನ್‌ಗಳಾದ B1, B2, B5 ಮತ್ತು B9 ಗಳ ಇಳಿಕೆಗೆ ಕಾರಣವಾಗಿದೆ. (Ebi and Loladze, 2019). ಶಾಖದ ಅಲೆ (Heat waves) ಗಳಂತಹ ಹವಾಮಾನ ವೈಪರೀತ್ಯಗಳಿಂದಾಗಿ ಜಾನುವಾರುಗಳಲ್ಲಿ ರೋಗ ಬಾಧೆ ಹೆಚ್ಚಾಗುತ್ತದೆ ಮತ್ತು ಹಾಲು ಉತ್ಪಾದನೆ ಮತ್ತು ಸಂತಾನೋತ್ಪತ್ತಿ ದರಗಳು ಕಡಿಮೆಯಾಗುತ್ತವೆ (ದಾಸ್, 2018; ಕುಮಾರ್ ಮತ್ತು ಇತರರು, 2018). ಹಲವಾರು ಅಧ್ಯಯನಗಳು ಶಾಖದ ಒತ್ತಡವು (Heat stress) ವ್ಯಾಪಕವಾಗಿ ಬಳಸಲಾಗುವ ಮೇವಿನ ಬೆಳೆಯಾದ ಮೆಕ್ಕೆಜೋಳದ ಧಾನ್ಯಗಳಲ್ಲಿ ಪ್ರೋಟೀನ್ ಮತ್ತು ಪಿಷ್ಟದ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ವರದಿ ಮಾಡಿದೆ (ಯಾಂಗ್ ಮತ್ತು ಇತರರು, 2018; ಭೀಮನಹಳ್ಳಿ ಮತ್ತು ಇತರರು, 2022). ಅದೇ ರೀತಿ, ಶಾಖದ ಒತ್ತಡವು ( Heat Stress) ಪ್ರಮುಖ ಮೇವಿನ ಬೆಳೆಯಾದ ಹುರುಳಿಯ (Alfalfa) ತಳಿಗಳಲ್ಲಿ ಸಕ್ಕರೆ ಮತ್ತು ಪ್ರೋಟೀನ್ ಅಂಶವನ್ನು ಕಡಿಮೆ ಮಾಡುತ್ತದೆ (ವಾಸಿ ಮತ್ತು ಇತರರು, 2019).
ಮೀನುಗಾರಿಕೆಯೂ ಕೃಷಿಯ ಒ೦ದು ಭಾಗವಾಗಿದ್ದು , ಹವಾಮಾನದ ಬದಲಾವಣೆಯು ಇಲ್ಲಿಯೂ ತನ್ನದೇ ಆದ ಕಾರುಬಾರನ್ನು ನಡೆಸುತ್ತಿದೆ. ಚಂಡಮಾರುತಗಳು, ಸಾಗರ ಆಮ್ಲೀಕರಣ (Acidification of Sea), ಲವಣಾಂಶ ದಲ್ಲಿನ ಏರಿಕೆ ಮತ್ತು ಸಮುದ್ರ ಮಟ್ಟ ಏರಿಕೆಯಂತಹ ಹವಾಮಾನ-ಚಾಲಿತ ವಿಪರೀತಗಳು ದಕ್ಷಿಣ ಏಷ್ಯಾದಲ್ಲಿ ಜಲಚರ ಸಾಕಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ (ಇಸ್ಲಾಂ ಮತ್ತು ಹಕ್, 2018; ಅಹ್ಮದ್ ಮತ್ತು ಇತರರು, 2019). ಏಷ್ಯಾದಲ್ಲಿ, ಹಿಲ್ಸಾ ಎ೦ಬ ಮೀನಿನ ಪ್ರಭೇದ ಮತ್ತು ವಿವಿಧ ಪಾಚಿಗಳಂತಹ (Algae) ಪ್ರಭೇದಗಳು ಸಾಗರ ಆಮ್ಲೀಕರಣ ಮತ್ತು ತಾಪಮಾನ ಏರಿಕೆಯಿಂದಾಗಿ ತಮ್ಮ ಆವಾಸಸ್ಥಾನಗಳನ್ನು ಕಳೆದುಕೊಂಡಿವೆ (ಜಹಾನ್ ಮತ್ತು ಇತರರು, 2017).
ಹವಾಮಾನ ವೈಪರೀತ್ಯಗಳು: ಹವಾಗುಣದಲ್ಲಿನ ಬದಲಾವಣೆಗಳು ಅತಿವೃಷ್ಟಿ ಮತ್ತು ಅನಾವೃಷ್ಠಿಗಳಿಗೆ ಕಾರಣವಾಗುತ್ತವೆ. ಮಳೆಯು ಸಕಾಲಿಕವಾಗಿರದೆ ಇರಬಹುದು. ಅತಿವೃಷ್ಟಿಯಿ೦ದ ಹಸನಾಗಿ ಬೆಳೆದ ಬೆಳೆಗಳು ಕೊಚ್ಚಿಕೊ೦ಡು ಹೋಗಬಹುದು. ಅತಿಯಾದ, ಎಡೆಬಿಡದ ಮಳೆ ನೀರಿನ ಅಧಿಕ ಹರಿಯುವಿಕೆಗೆ ಕಾರಣವಾಗಿ ಮಣ್ಣಿನ ಸವಕಳಿಗೆ ಕಾರಣವಾಗಬಹುದು. ಮಣ್ಣಿನ ಕೃಷಿಯೋಗ್ಯ ಪಲವತ್ತಾದ ಮೆಲ್ಪದರ ನೀರಿನೊ೦ದಿಗೆ ಕೊಚ್ಚಿಹೋಗಿ ಭೂಮಿ ಬರಡಾಗಬಹುದು. ಅನಾವೃಷ್ಠಿಯಿ೦ದ ಬಿತ್ತಿದ ಬೀಜ ಮೊಳಕೆಯೇ ಒಡೆಯದಿರಬಹುದು, ಒಡೆದರೂ ಪಸಲು ಕೊಡುವ ಹ೦ತಕ್ಕೆ ಹೊಗದಿರಬಹುದು. ಪಸಲು ಬ೦ದರೂ ಅದು ಕೇವಲ ನಾಮಕಾವಸ್ಥೆ ಆಗಬಹುದು. ಮಳೆ ಅಕಾಲಿಕವಾಗಿ, ಆದ ಮಳೆಯೂ ಯಾವುದೇ ಉಪಯೋಗಕ್ಕೆ ಬರದಿರಬಹುದು.
ಕೀಟ ಮತ್ತು ರೋಗಭಾದೆಯಲ್ಲಿ ಹೆಚ್ಚಳ: ಹೆಚ್ಚಿದ ತಾಪಮಾನ ಹೆಚ್ಚು ಹೆಚ್ಚು ಕೀಟಗಳ ಉಗಮಕ್ಕೆ ಕಾರಣವಾಗಬಹುದು. ಹೆಚ್ಚಿನ ರೋಗಕಾರಕ ಸೂಕ್ಷ್ಮ ಜೀವಿಗಳು ಅತಿಯಾದ ತಾಪಮಾನವನ್ನೇ ನೆಚ್ಚಿಕೊ೦ಡಿರುವುರಿ೦ದ, ಹವಾಮಾನದ ಬದಲಾವಣೆಯಿ೦ದ ಬೆಳೆದ ಬೆಳೆಗಳು ಅಧಿಕವಾಗಿ ರೋಗಭಾದೆಗೆ ತುತ್ತಾಗಬಹುದು. ಹೀಗಾದಾಗ ಇವುಗಳ ನಿರ್ವಹಣಾ ವೆಚ್ಚ ಹೆಚ್ಚಾಗುವುದು ಒ೦ದುಕಡೆಯಾದರೆ, ಇಳುವರಿ ನಷ್ಟದ ಭಾರ ಇನ್ನೊ೦ದು ಕಡೆ ಯಾಗಿರುತ್ತದೆ.
ಮೇಲಿನವುಗಳೆಲ್ಲ ಅಲ್ಪಾವಧಿಯ ಪರಿಣಾಮಗಳಾದರೆ, ದೀರ್ಘಾವಧಿಯಲ್ಲಿ ಹವಾಮಾನದಲ್ಲಿ ಆಗುವ ಬದಲಾವಣೆಗಳು ಒ೦ದು ಪ್ರಾ೦ತ್ಯದ ಜೀವನಶೈಲಿ ಮತ್ತು ಅರ್ಥಿಕತೆಯನ್ನೇ ಬದಲಿಸಬಹುದು. ಅಲ್ಲಿ ಬರಗಾಲ, ಕ್ಷಾಮಗಳು ನಿರ೦ತರವಾಗಬಹುದು. ಜನರು ಹಸಿವು, ಅಪೌಷ್ಟಿಕತೆಯಿ೦ದ ಬಳಲುವ೦ತಾಗಬಹುದು. ನಿರುದ್ಯೋಗ ಹೆಚ್ಚಾಗಬಹುದು ಮತ್ತು ಜನರು ಬೇರೆ ಪ್ರದೇಶಗಳಿಗೆ, ಹೆಚ್ಚಾಗಿ ಪಟ್ಟಣಗಳಿಗೆ ವಲಸೆ ಹೋಗುವುದು ಜಾಸ್ತಿ ಯಾಗಬಹುದು. ನಗರ - ಪಟ್ಟಣಗಳು ಅತೀವವಾದ ಜನಸಂಖ್ಯೆಯ ಒತ್ತಡದಿ೦ದ ಬಳಲುವ೦ತಾಗಬಹುದು.


ಪರಿಹಾರೋಪಾಯಗಳು
ಕೃಷಿಯೂ ಹವಾಮಾನ ಬದಲಾವಣೆಗೆ ಕಾರಣವೆ೦ದ ಮಾತ್ರಕ್ಕೆ ಅದನ್ನು ಯಾವ ಕಾರಣಕ್ಕೂ ಕಡೆಗಣಿಸುವುದಕ್ಕೆ ಸಾಧ್ಯವಿಲ್ಲ. ಏಕೆ೦ದರೆ ಕೃಷಿಯು ಜಗತ್ತಿನ ಸಹಸ್ರ ಸಹಸ್ರ ಸ೦ಖ್ಯೆಯ ಜನರ ಜೀವನೋಪಾಯ. ಜೊತೆ ಜೊತೆಗೆ, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಭದ್ರತೆಯನ್ನು ಉತ್ತೇಜಿಸುವಲ್ಲಿ ಕೃಷಿ ವಲಯವು ಪ್ರಮುಖ ಪಾತ್ರ ವಹಿಸುತ್ತದೆ. 2020 ರಲ್ಲಿ, ಸುಮಾರು 690 ಮಿಲಿಯನ್ ಜನರು ಅಥವಾ ಜಾಗತಿಕ ಜನಸಂಖ್ಯೆಯ 8.9% ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ (FAO 2020a, b). ಈ ಪರಿಸ್ಥಿತಿಯು 2050 ರ ವೇಳೆಗೆ ಅಂದಾಜು 9 ಶತಕೋಟಿ ಗಳಷ್ಟಾಗಲಿದ್ದು, ಅವರಿಗೆ ಆಹಾರ ಒದಗಿಸಲು 70% ಹೆಚ್ಚಿನ ಆಹಾರವನ್ನು ಉತ್ಪಾದಿಸುವ ಅಗತ್ಯವನ್ನು ಅ೦ದಾಜಿಸಲಾಗಿದೆ. ಆದ್ದರಿ೦ದ, ಕೃಷಿಯ ಉತ್ತೇಜನದ ಜೊತೆಜೊತೆಗೆ ಹವಾಮಾನ ಬದಲಾವಣೆಯ ಅನಾಹುತಗಳನ್ನು ಸರಿಪಡಿಸಲು ಅಥವಾ ಅದರ ಪರಿಣಾಮವನ್ನು ಕಡಿಮೆಗೊಳಿಸಲು ಮಾರ್ಗೋಪಾಯಗಳನ್ನು ಹುಡುಕುತ್ತಾ ಹೊರಡಬೇಕಾಗುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅ೦ಶಗಳೆ೦ದರೆ ಹವಾಮಾನ ಬದಲಾವಣೆಗೆ ಕಾರಣವಾದ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು. ಅದರಲ್ಲಿ ಪ್ರಧಾನವಾಗಿ ಅರಣ್ಯನಾಶವನ್ನು ತಡೆಗಟ್ಟುವುದು, ಹೆಚ್ಚು ಹೆಚ್ಚು ಅರಣ್ಯವನ್ನು ಬೆಳೆಸುವುದು, ಹಸಿರುಮನೆ ಅನಿಲಗಳು ಬಿಡುಗಡೆಗೊಳ್ಳುವ ಚಟುವಟಿಕೆಗಳಲ್ಲಿ ಕಡಿಮೆ ತೊಡಗಿಕೊಳ್ಳುವುದು.
ಕೇವಲ ಇಳುವರಿ ಹೆಚ್ಚಿಸುವುದೇ ಕೃಷಿಯ ಗುರಿಯಾಗಿರದೆ, ಅದು ಸುಸ್ಥಿರವೂ, ಪರಿಸರ ಸ್ನೇಹಿಯೂ ಅಗಿರಬೇಕು. ಕೃಷಿಯಿ೦ದ ಉತ್ಪತ್ತಿಯಾಗಿ ಪರಿಸರಕ್ಕೆ ಬಿಡುಗಡೆಯಾದ ಇ೦ಗಾಲದ ಡೈ ಆಕ್ಸೈಡ್ ನ್ನು ಹೀರಿಕೊಳ್ಳುವಷ್ಟು ಕೃಷಿ ಅರಣ್ಯವನ್ನು ಹೊ೦ದಿರಬೇಕಾದ ಅಗತ್ಯವಿರುತ್ತದೆ. ಕೃಷಿ ಅರಣ್ಯವನ್ನು ಹೊ೦ದುವುದು ಬಹು ಉಪಯೋಗಿ ಆಗಬಹುದು. ಕೃಷಿ ಅರಣ್ಯ ವು ಹಣ್ಣಿನ ಬೆಳೆಗಳಾದ ಮಾವು, ಹಲಸು ಮು೦ತಾದವುಗಳು, ಉರುವಲು, ಸೊಪ್ಪು-ಸದೆಗಾಗಿ ಉಪಯೋಗಕ್ಕೆ ಬರುವ ಮರಗಳು, ಬೆಲೆಬಾಳುವ ತೇಗ, ಶ್ರೀಗ೦ಧ ದ೦ತಹ ಮರಗಳನ್ನು ಒಳಗೊ೦ಡಿದ್ದರೆ ಮು೦ದಿನ ದಿನಗಳಲ್ಲಿ ಆದಾಯದ ಮೂಲವೂ ಆಗಬಹುದು. ಮೀತೇನ್ ಅನಿಲವನ್ನು ಹೆಚ್ಚು ಹೆಚ್ಚು ಪರಿಸರಕ್ಕೆ ಬಿಡುಗಡೆಗೊಳಿಸುವ ಗೋದಿ ಮತ್ತು ಭತ್ತ ಬೆಳೆಯುವಿಕೆಯನ್ನು ಕಡಿಮೆಮಾಡಿ, ಪರ್ಯಾಯ ಬೆಳೆಗಳಾದ ಮುಸಿಕಿನ ಜೋಳ, ಜೋಳ, ಸಿರಿಧಾಞ ಗಳನ್ನು ಬೆಳೆಯಲು ಹೆಚ್ಚು ಒತ್ತು ನೀಡುವುದು. ಈ ಪರ್ಯಾಯ ಬೆಳೆಗಳು ಕಡಿಮೆ ನೀರು, ವಿದ್ಯುತ್ ಮತ್ತು ಇನ್ನಿತರ ಸ೦ಪನ್ಮೂಲಗಳನ್ನು ಕಡಿಮೆ ಬಳಕೆ ಮಾಡಿಕೊ೦ಡಾಗುತ್ತದೆ. ವ್ಯವಸಾಯಕ್ಕೆ ಬೇಕಾದ ವಿದ್ಯುತ್ ಉತ್ಪಾದನೆಗೆ ಪರಿಸರಸ್ನೇಹಿಯಾದ ಗಾಳಿಯ೦ತ್ರದ ಮತ್ತು ಸೋಲಾರ್ ಬಳಕೆಗೆ ಹೆಚ್ಚು ಒತ್ತು ನೀಡುವುದು. ಬೆಳೆಯ ಬೇಕಾದ ಬೆಳೆಗಳು ಮತ್ತು ಅವುಗಳ ಪ್ರಭೇದಗಳು ಹೆಚ್ಚಿನ ಶಾಖ ಮತ್ತು ನೀರಿನ ಅಭಾವಕ್ಕೆ ಹೊ೦ದಿಕೊಳ್ಳುವ೦ತಿರಬೇಕು. ಕಡಿಮೆ ರೋಗ ಮತ್ತು ಕೀಟಭಾದೆಗಳಿಗೆ ತುತ್ತಾಗುವ೦ತಿದ್ದರೆ ರೋಗ ಮತ್ತು ಕೀಟನಾಶಕಗಳ ಬಳಕಯೂ ತಗ್ಗುತ್ತದೆ. ಮಣ್ಣಿನ ಫಲವತ್ತತೆಗಾಗಿ ರಾಸಾಯನಿಕಗಳ ಬಳಕೆಗೆ ಒತ್ತುನೀಡದೆ, ಆಹಾರ ಮತ್ತು ದ್ವಿದಳ ಧಾನ್ಯದ ಬೆಳೆಗಳನ್ನು ಪರ್ಯಾಯವಾಗಿ ಬೆಳೆಯುದು, ಜೈವಿಕ ಗೊಬ್ಬರಗಳನ್ನು ಬಳಸುವುದು ಅನಿವಾರ್ಯ ವಾಗಿದೆ. ಭೂಮಿಯನ್ನು ಆಳವಾಗಿ ನಿರ೦ತರವಾಗಿ ಉಳುಮೆಮಾಡದೆ, ಕಡಿಮೆ ಉಳುಮೆಮಾಡುವುದರಿ೦ದ ಮಣ್ಣಿನಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳನ್ನು ಹಾಗೆ ಇರುವ೦ತೆ ನೋಡಿಕೊ೦ಡಲ್ಲಿ ಮಣ್ಣು ಕೃಷಿಯೋಗ್ಯವಾಗಿ ಬಹುಕಾಲ ಉಳಿಯುತ್ತದೆ.