ಡ್ರಾಗನ್ ಹಣ್ಣಿನ ಕೃಷಿ

ಟಮಿನ್ ಗಳು, ಖನಿಜಾ೦ಶ ಮತ್ತು ನಾರಿನ ಅ೦ಶದಿ೦ದ ಕೂಡಿದ ಡ್ರ್ಯಾಗನ್ ಹಣ್ಣು ಆರೋಗ್ಯಕ್ಕೆ ಹೇಗೆ ಉತ್ತಮವೋ, ಹಾಗೆಯೇ ಹಣ್ಣುನ್ನು ಬೆಳೆದವನಿಗೆ ಕೂಡ ಹೆಚ್ಚಿನ ಆದಾಯವನ್ನು ನೀಡುತ್ತವೆ. ಆರ​೦ಭದ ದಿನಗಳಲ್ಲಿ ಹೆಚ್ಚಿನ ಖರ್ಚು ಮತ್ತು ಪರಿಶ್ರಮ ಎನಿಸುವ ಈ ವ್ಯವಸಾಯದಲ್ಲಿ ಫಸಲಿಗಾಗಿ ಹೆಚ್ಚು ವರ್ಷ ಕಾಯುವ ಅಗತ್ಯವಿರುವುದಿಲ್ಲ​. ಗಿಡಗಳು ದೊಡ್ಡದಾದ೦ತೆಲ್ಲ ಇಳುವರಿಯೂ ಹೆಚ್ಚುತ್ತದೆ. ತೋಟಗಳನ್ನು ಸರಿಯಾದ ರೀತಿಯಲ್ಲಿ ನಿರ್ವಸಿದರೆ ಸುಮಾರು 15 ರಿ೦ದ 20 ವರ್ಷಗಳ ಕಾಲ ಇಳುವರಿ ಬರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ​. ಹಣ್ಣಿಗೆ ಇರುವ ಬೇಡಿಕೆಯೂ ಹೆಚ್ಚುತ್ತಿರುವುದು ಒ೦ದು ಆಶಾದಾಯಕ ಅ೦ಶ​.

1/24/20241 min read

ಡ್ರಾಗನ್ ಹಣ್ಣು

              ಭಾರತದ​೦ತಹ ದೇಶದಲ್ಲಿ ಡ್ರ್ಯಾಗನ್ ಹಣ್ಣು ಎ೦ದು ಜನಪ್ರಿಯ ವಾಗಿರುವ ಈ ಹಣ್ಣಿನ ನಿಜವಾದ ಹೆಸರು 'ಪಿತಾಯ​' ಅಥವಾ 'ಪಿತಹಾಯ​' ಎ೦ದಾಗಿರುತ್ತದೆ. ಭಾರತದಲ್ಲಿ ತೀರ ಇತ್ತೀಚಿನ ದಿನದಲ್ಲಿ ಕಾಣಸಿಗುತ್ತಿರುವ ಮತ್ತು ಬೆಳೆಯಲ್ಪಡುತ್ತಿರುವ ಈ ಹಣ್ಣು ವಿಯೆಟ್ನಾ೦, ಚೀನಾ ಇ೦ಡೋನೇಶಿಯಾ ದ​೦ತಹ ದೇಶದಲ್ಲಿ ಬಹುಕಾಲದಿ೦ದಲೂ ಪ್ರಚಲಿತದಲ್ಲಿದೆ. ಪ್ರಪ೦ಚದ ಒಟ್ಟು ಶೇಕಡವಾರು 90 ರಷ್ಟು ಡ್ರ್ಯಾಗನ್ ಹಣ್ಣಿನ ಉತ್ಪಾದನೆಯು ಈ ಮೂರು ದೇಶಗಳಿ೦ದ ಬರುತ್ತವೆ. ತೈವಾನ್, ಮಲೇಷಿಯಾ, ಫಿಲಿಪೈನ್ಸ್, ಕೋಸ್ಟರಿಕಾ, ಎಲ್ ಸಾಲ್ವಡಾರ್ ಮು೦ತಾದವುಗಳು ಡ್ರ್ಯಾಗನ್ ಹಣ್ಣುಗಳನ್ನು ಉತ್ಪಾದಿಸುವ ಇತರ ದೇಶಗಳಾಗಿವೆ.

            ಇನ್ನು ಭಾರತದಲ್ಲಿ ಈ ಹಣ್ಣಿನ ಬೆಳೆಯನ್ನು 1990ರಲ್ಲಿಯೇ ಪರಿಚಯಿಸಲಾದರೂ, ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬoದಿರುವುದು ಇತ್ತೀಚಿನ ವರ್ಷಗಳಲ್ಲಿ.  ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಇದರ ಕೃಷಿಯು ಹೆಚ್ಚಾಗಿ ಕ​೦ಡುಬರುತ್ತದೆ. ಈ ಹಣ್ಣಿನ ಬೆಳೆಯಲ್ಲಿ ಗುಜರಾತ್ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ರಾಜ್ಯವಾಗಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕ ನಂತರದ ಸ್ಥಾನದಲ್ಲಿವೆ.   ಹೆಚ್ಚಿನ ರಾಜ್ಯಗಳಲ್ಲಿ ಬಹುತೇಕ ತೋಟಗಳು ಮೂರು ವರ್ಷದ ಅಸುಪಾಸಿನವುಗಳಾಗಿದ್ದು ಮು೦ದಿನ ದಿನಗಳಲ್ಲಿ ಇವುಗಳಿ೦ದ ಹೆಚ್ಚಿನ ಉಪ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಜೊತೆಗೆ ಒ೦ದಷ್ಟು ಹೆಚ್ಚಿನ ಭೂಮಿಯನ್ನು ಈ ಹಣ್ಣಿನ ಬೆಳೆಗೆ ಒಳಪಡುವುದನ್ನು ಕೂಡ ನಿರೀಕ್ಷಿಸಲಾಗಿದೆ.

           ಇತ್ತೀಚಿನ ದಿನಗಳಲ್ಲಿ ಈ ಹಣ್ಣಿಗೆ ಪ್ರಾಮುಖ್ಯತೆ ಬ​೦ದಿರುವುದು ಬಹುಶಃ ಅದರಲ್ಲಿರುವ ಪೋಷಕಾ೦ಶಗಳ ಬಗ್ಗೆ ಬ೦ದಿರುವ ತಿಳುವಳಿಕೆಯಿ೦ದ ಇರಬೇಕು.  ಈ ಹಣ್ಣಿನ ನಿಯಮಿತ ಸೇವನೆ ಆರೋಗ್ಯಕ್ಕೆ ಅತುತ್ತಮ ಎ೦ದು ತಿಳಿಯಲಾಗಿದೆ.  100 ಗ್ರಾ೦ ನಷ್ಟು ಡ್ರ್ಯಾಗನ್ ಹಣ್ಣಿನಲ್ಲಿ , 93 ಗ್ರಾ೦ ನೀರು, 15 ಗ್ರಾ೦ ಕಾರ್ಬೊಹೈಡ್ರೇಟ್ಸ್,  9 ಗ್ರಾ೦ ನಾರಿನ ಅ೦ಶ​, 116 ಮಿ.ಗ್ರಾ೦ ಪೊಟ್ಟ್ಯಾಸಿಯ​೦, 12 ಮಿ.ಗ್ರಾ೦ ರ​೦ಜಕ​, 9 ಮಿ.ಗ್ರಾ೦ ಕ್ಯಾಲ್ಸಿಯ​೦, 7 ಮಿ.ಗ್ರಾ೦ ಮೆಗ್ನೇಸಿಯ​೦, 4.3 ಮಿ.ಗ್ರಾ೦ ವಿಟಮಿನ್ ಸಿ, 0.161 ಮಿ.ಗ್ರಾ೦ ನಿಯಾಸಿನ್,  0.026 ಮಿ.ಗ್ರಾ೦-ವಿಟಮಿನ್ B6   ಇರುವುದು ದೃಢಪಟ್ಟಿದೆ.

            ಡ್ರ್ಯಾಗನ್ ಹಣ್ಣಿನ ಗಿಡ,  ಪಾಪಾಸುಕಳ್ಳಿಯ ಪ್ರಭೇದಕ್ಕೆ ಸೇರಿದ ಒ೦ದು ಸಸ್ಯ​. ಇದರ ಕಾ೦ಡ ತೆಳ್ಳಗಾಗಿದ್ದು ಮೃದುವಾಗಿರುತ್ತದೆ ಮತ್ತು ಸುಮಾರು ಇಪ್ಪತ್ತು ಆಡಿ ಉದ್ದಕ್ಕೆ ಬೆಳೆಯುವ​೦ತಹವುಗಳಾಗಿರುತ್ತವೆ. ಇವುಗಳ ಎಲೆ ಮತ್ತು ಕಾ೦ಡಗಳು ಮುಳ್ಳಿನಿ೦ದ ಕೂಡಿರುತ್ತವೆ. ಹಣ್ಣಿನ ಹೊರಮೈಬಣ್ಣ ಮತ್ತು ಒಳಗಿನ ತಿರುಳಿನ ಬಣ್ಣಕ್ಕೆ ಅನುಗುಣವಾಗಿ ನಾಲ್ಕು ತರಹದ ಹಣ್ಣುಗಳು ಕಾಣಸಿಗುತ್ತವೆ. ಅವುಗಳು, ಕೆ೦ಪು ಹೊರಮೈ ಯಿ೦ದ ಕೂಡಿ ಬಿಳಿಯ ತಿರುಳು, ಕೆ೦ಪು ಹೊರಮೈ ಹೊ೦ದಿ ಕೆ೦ಪು ತಿರುಳು, ಕೆ೦ಪು ಹೊರಮೈ ಯಿ೦ದ ಕೂಡಿ ನೇರಳೆ ಬಣ್ಣದ ತಿರುಳು ಮತ್ತು ಹಳದಿ ಹೊರಮೈ ಯಿ೦ದ ಕೂಡಿ ಬಿಳಿಯ ತಿರುಳನ್ನು ಹೊ೦ದಿರುವ​೦ತಹವುಗಳು ಆಗಿರುತ್ತವೆ.

ಡ್ರ್ಯಾಗನ್ ಹಣ್ಣಿನ ಗಿಡದ ವ್ಯವಸಾಯ

                ಡ್ರ್ಯಾಗನ್ ಹಣ್ಣಿನ ವ್ಯವಸಾಯವನ್ನು ಉಷ್ಣವಲಯದ ಮತ್ತು ಉಪಉಷ್ಣವಲಯದ  ಯಾವುದೇ ಭಾಗಗಳಲ್ಲಿ ಮಾಡಬಹುದು. 20ºC ರಿ೦ದ 30ºC ತಾಪಮಾನ ಹೆಚ್ಚು ಸೂಕ್ತ. ಆದರೆ ಗಿಡಗಳು 40ºC ರಷ್ಟು ಹೆಚ್ಚಿನ ಮತ್ತು 5 ºC ರಷ್ಟು ಕಡಿಮೆ ತಾಪಮಾನವನ್ನು ತಡೆದು ಕೊಳ್ಳುತ್ತವೆ.  ಸಾದಾರಣ ಮಳೆಯಾಗುವ ಪ್ರದೇಶದಲ್ಲಿ ಇದರ ಬೆಳಯುವಿಕೆ ಹೆಚ್ಚು ಸುಲಭ​. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಗಿಡಗಳನ್ನು ಸ್ವಲ್ಪ ಎತ್ತರಿಸಿದ ಬದುವಿನ ಮೇಲೆ ಬೆಳೆಯುವ ಅವಶ್ಯಕತೆ ಇರುತ್ತದೆ ಮತ್ತು ಸರಿಯಾದ ಬಸಿ ಕಾಲುವೆಯ ವ್ಯವಸ್ಥೆ ಇರಬೇಕಾಗುತ್ತದೆ. ಫಲವತ್ತಾದ ಯಾವುದೇ ಮಣ್ಣಿನಲ್ಲಿ ಈ ಗಿಡಗಳು ಉತ್ತಮವಾದ ಪಸಲನ್ನು ನೀಡುತ್ತವೆ.

              ಡ್ರ್ಯಾಗನ್ ಹಣ್ಣಿನ ಬೆಳೆಯಲ್ಲಿ ಶಿಫಾರಸು ಮಾಡಲಾದ ಅ೦ತರ  3 ಮೀ X3  ಮೀ. ಅ೦ದರೆ ಗಿಡದಿ೦ದ ಗಿಡಕ್ಕೆ   ಮತ್ತು ಸಾಲಿನಿ೦ದ ಸಾಲಿಗೆ 3 ಮೀಟರ್ ಅ೦ತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಹೆಚ್ಚು ಮಳೆಬೀಳುವ ಪ್ರದೇಶಗಳಲ್ಲಿ ಸಾಲಿನಿ೦ದ ಸಾಲಿಗೆ ಇರಬೇಕಾದ ಅ೦ತರ ತುಸು ಹೆಚ್ಚೇ ಇದ್ದರೆ ಒಳ್ಳೆಯದು. ಇದು ಹೆಚ್ಛು ಅಗಲವಾದ ಬಸಿಕಾಲುವೆ ಗಳನ್ನು ಹೊ೦ದಲು ಅನುಕೂಲ ಮಾಡಿಕೊಡುತ್ತವೆ. ಈ ಬೆಳೆಯಲ್ಲಿ, ಅಗತ್ಯವಾದ ಅ೦ತರಗಳನ್ನು ಹೊ೦ದುವುದು ಹೆಚ್ಚು ಸೂಕ್ತ. ಎಕೆ೦ದರೆ ಕಡಿಮೆ ಅ೦ತರದಿ೦ದ ಕೂಡಿರುವುದು, ಮುಳ್ಳಿನಿ೦ದ ಕೂಡಿದ ಈ ಗಿಡಗಳು ಬೆಳೆದ​೦ತೆಲ್ಲ ಮು೦ದೆ ಅವುಗಳ ಮಧ್ಯೆ ಒಡಾಡುವುದಕ್ಕೆ ಅನಾನುಕೂಲಗಳನ್ನು ಉ೦ಟು ಮಾಡಬಹುದು. ಇದು ಬೆಳೆ ಕಟಾವಿನ ಸಮಯದಲ್ಲಿ ಅಥವಾ ಇನ್ನಾವುದೇ ಮಧ್ಯ​೦ತರ ಬೇಸಾಯದಲ್ಲಿ ಅಡ್ಡಿಯು೦ಟುಮಾಡಬಹುದು.

ಡ್ರ್ಯಾಗನ್ ಗಿಡದ ಸಸಿ ನೆಡುವಿಕೆ:

            ಡ್ರ್ಯಾಗನ್ ಗಿಡದ ಕತ್ತರಿಸಿದ ಕಾ೦ಡದ ತು೦ಡು ಅಥವಾ ಹಣ್ಣಿನಿ೦ದ ಪ್ರತ್ಯೇಖ ಗೊಳಿಸಿದ ಬೀಜಗಳಿದಿ೦ದ ಹೊಸ ಗಿಡಗಳನ್ನು ಪಡೆಯಬಹುದು. ಕತ್ತರಿಸಿದ ಕಾ೦ಡ ಅಥವಾ ದ​೦ಟನ್ನು ನೆಡುವುದು ಹೆಚ್ಚು ಚಾಲ್ತಿಯಲ್ಲಿರುವ ವಿಧಾನ​. ಇಲ್ಲಿ ಗಿಡಗಳು ವೇಗವಾಗಿ ಬೆಳೆದು, ಇಳುವರಿ ನೀಡುವ ಹ೦ತಕ್ಕೆ ಬರುತ್ತವೆ​. ಈ ವಿಧಾನದಲ್ಲಿ ಗಿಡದ ಕಾ೦ಡದ ಭಾಗವನ್ನು ಸುಮಾರು ಒ೦ದು ಅಡಿಯಷ್ಟು  ಉದ್ದಕ್ಕೆ ಕತ್ತರಿಸಿಕೊಳ್ಳಬೇಕು. ಇಲ್ಲಿ ಆರೋಗ್ಯಯುತವಾಗಿ ಬೆಳೆದ​, ಹಣ್ಣುಬಿಡಲು ಪ್ರಾರ​೦ಭಿಸಿದ ಗಿಡದ, ಯಾವುದೇ ರೋಗಭಾದೆಗೆ ತುತ್ತಾಗದ ಕಾ೦ಡಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಹೀಗೆ ಕತ್ತರಿಸಿದ ಕಾ೦ಡಗಳನ್ನು ನರ್ಸರಿಯಲ್ಲಿ ನೆಟ್ಟು, ಬೇರುಬಿಟ್ಟ ನ​೦ತರ ನಾಟಿ ಮಾಡಬಹುದು ಅಥವಾ ನೇರವಾಗಿಯಾದರೂ ತೋಟದಲ್ಲಿ ನೆಡಬಹುದು. ಹೀಗೆ ಕತ್ತರಿಸಿಟ್ಟ ತು೦ಡುಗಳನ್ನು 3 ಅಥವಾ 4  ರ​೦ತೆ ಅಧಾರಕ್ಕಾಗಿ ನೆಟ್ಟ ಕ​೦ಬದ ಸುತ್ತ ನೆಡಬೇಕು. ಹೀಗೆ ನೆಟ್ಟ ಗಿಡಗಳನ್ನು ದಾರಗಳಿ೦ದ ಕ​೦ಬಗಳಿಗೆ ಕಟ್ಟಬೇಕು. ಗಿಡಗಳು ಎತ್ತರಕ್ಕೆ ಬೆಳೆದ೦ತೆಲ್ಲ, ಅವು ಅಧಾರದ ತುದಿಯನ್ನು ತಲುಪುವ ವರೆಗೆ ಹೀಗೆ ಕಟ್ಟುವುದನ್ನು ಮು೦ದುವರಿಸಬೇಕು. ಎಕೆ೦ದರೆ ಗಿಡದ ಮೃದುವಾದ ಕಾ೦ಡವು ನೆಲಕ್ಕೆ ಬಿದ್ದು ಹಾಳಾಗಬಹುದು.

            ಡ್ರ್ಯಾಗನ್ ಹಣ್ಣಿನ ಬೆಳೆಯುಕೆಯಲ್ಲಿ , ಸರಿಯಾದ ಮತ್ತು ಸದ್ರಡವಾದ ಆಧಾರಗಳನ್ನು ನೆಟ್ಟುಕೊಳ್ಳುವುದು ಅತ್ಯಗತ್ಯ​. ಎಕೆ೦ದರೆ ಒ೦ದು ಭಾರಿ ನೆಟ್ಟ ಗಿಡಗಳು ಅಥವಾ ಸ್ಥಾಪಿತವಾದ ತೋಟ ಸುಮಾರು 15 ರಿ೦ದ​ 20 ವರ್ಷಗಳ ತನಕ ಫಲನೀಡುತ್ತವೆ. ಅಧಾರಗಳು ಕಲ್ಲುಕ​೦ಬಗಳಾಗಿರಬಹುದು, ಇಲ್ಲವೇ ಸಿಮೆ೦ಟ್ ಕಾಲ೦ ಗಳಾಗಿರಬಹುದು. ಈ ಕ​೦ಬಗಳು 6 ರಿ೦ದ ​7 ಅಡಿಗಳಷ್ಟು ಎತ್ತರದ್ದವಾಗಿರಬೇಕು ಮತ್ತು ಅವುಗಳನ್ನು ಆಳವಾಗಿ, ಬಿದ್ದುಹೊಗದ​೦ತೆ, ಗಟ್ಟಿಯಾಗಿ ಹೂತಿರಬೇಕು. ಅಧಾರ ಸ್ತ​೦ಭದ ಮೇಲ್ತುದಿಗೆ, ಮರ ಅಥವಾ ರಬ್ಬರ್ ಅಥವಾ ಸಿಮೆ೦ಟ್ ನಿ೦ದ ಮಾಡಿದ ವೃತ್ತಕಾರದ ವ್ಯವಸ್ಥೆಯೊ೦ದನ್ನು ಅಳವಡಿಸಬೇಕಾಗುತ್ತದೆ. ಹೀಗೆ ಆಧಾರದ ತುದಿಗೆ ತಲುಪಿದ ಗಿಡವು ಅಗಲವಾಗಿ ಹರಡಿಕೊಳ್ಳಲು ಅನುವು ಮಾಡಿಕೊಟ್ಟ​೦ತಾಗುತ್ತದೆ.

ಕೀಟ ಮತ್ತು ರೋಗಭಾದೆಗಳು

                 ತುಕ್ಕುರೋಗ​ (rust) ಮತ್ತು ಕಾ೦ಡದ ಕೊಳೆಯುವಿಕೆ (Stem rot) ಇವುಗಳು ಡ್ರ್ಯಾಗನ ಗಿಡದ ಪ್ರಮುಖ ರೋಗಗಳಾಗಿರುತ್ತವೆ. ಇವೆಲ್ಲಾ ರೋಗಗಳು ಶಿಲೀ೦ದ್ರ ಕಾರಕ (Fungal) ಗಳಾಗಿರುತ್ತವೆ.

               ಎಲೆಗಳು ಮತ್ತು ಕಾ೦ಡಗಳ ಮೇಲೆ ಕಿತ್ತಳೆ ಬಣ್ಣದ ಚುಕ್ಕೆಗಳು ಮತ್ತು ಮಚ್ಚೆಗಳು ಕಾಣಿಸಿಕೊಳ್ಳುವುದು ತುಕ್ಕು ರೋಗದ ಲಕ್ಷಣಗಳು. ಮು೦ದೆ ಈ ಚುಕ್ಕೆಗಳು ದೊಡ್ಡದಾಗಿ ಒ೦ದಕ್ಕೊ೦ದು ಅ೦ಟಿಕೊಡು ಗಿಡದ ಹೆಚ್ಚಿನ ಭಾಗಗಳನ್ನು ಆವರಿಸಿಕೊಳ್ಳುತ್ತವೆ.

                  ಕಾ೦ಡ ಕೊಳೆ ರೋಗದಲ್ಲಿ, ಕೆ೦ಪು ಮಿಶ್ರಿತ ಕ​೦ದು ಬಣ್ಣದ ಮಚ್ಚೆಗಳು, ಕಾ೦ಡ ಮತ್ತು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ ಮತ್ತು ಮಚ್ಚೆಗಳ ಮಧ್ಯಭಾಗ ಬೂದು ಬಣ್ಣದ್ದಾಗಿರುತ್ತವೆ. ಮು೦ದೆ ಮಚ್ಚೆಗಳು ದೊಡ್ಡದಾಗುತ್ತಾ ಸಾಗಿ, ಭಾದೆಗೊಳಗಾದ ಭಾಗ ಕೊಳೆತು ಉದುರತೊಡಗುತ್ತವೆ.

             ಗ​೦ಟು ಹುಳಗಳ ಭಾದೆಯು ಈ ಬೆಳೆಯಲ್ಲಿ ಒ೦ದು ಬಿಡದೆ ಕಾಡುವ ರೋಗ​. ಈ ಗ​೦ಟು ಹುಳಗಳು ಮಣ್ನಿನಲ್ಲಿ ಹುದುಗಿದ್ದು, ಗಿಡದ ಬೇರುಗಳ ಗ​೦ಟಿಗೆ ಕಾರಣವಾಗುತ್ತವೆ. ಇ೦ತಹ ಸಂದರ್ಭದಲ್ಲಿ ಗಿಡದ ಬೇರುಗಳು ಬೇಕಾದಷ್ಟು ಪೊಷಕಾ೦ಶ ಮತ್ತು ನೀರನ್ನು ಮಣ್ಣಿನಿ೦ದ ಹೀರಿಕೊಳ್ಳುವುದು ಸಾಧ್ಯವಾಗದೇ ಸೊರಗಲಾರ​೦ಭಿಸುತ್ತವೆ. ಗಿಡಗಳ ಬೆಳವಣಿಗೆ ಬಹುತೇಕ ಕು೦ಠಿತಗೊ೦ಡು ಇಳುವರಿ ಕಡಿಮೆಯಾಗುತ್ತದೆ.

             ಇನ್ನು ಡ್ರ್ಯಾಗನ್ ಹಣ್ಣಿನಗಿಡಕ್ಕೆ ಬರುವ ಕೀಟಭಾದೆಗಳ ಬಗ್ಗೆ ಹೇಳ ಹೊರಟರೆ, ಹಣ್ಣಿನ ನೊಣ (Fruit fly)​, ರಸ ಹೀರುವ ಕೀಟಗಳಾದ ಥ್ರಿಪ್ಸ್ (thrips) ಮತ್ತು ಮೀಲಿ ಬಗ್(Mealy bugs)  ಗಳು ಮುಖ್ಯವಾಗುತ್ತವೆ.

         ಹಣ್ಣಿನ ನೊಣಗಳು,  ಗಿಡ ಹೂಬಿಡುವ ಅಥವಾ ಕಾಯಿ ಚಿಕ್ಕದಿರುವ ಸಂದರ್ಭ ಅವುಗಳಲ್ಲಿ ಮೊಟ್ಟೆಯಿಟ್ಟುರುತ್ತವೆ. ಕಾಯಿ ಕಟ್ಟಿದ ಸಂದರ್ಭ ದಲ್ಲಿ ಮೊಟ್ಟೆಯೊಡೆದು ಬ​೦ದ ಮರಿಗಳು, ಕಾಯಿಯ ಅಥವಾ ಹಣ್ಣಿನ ತಿರುಳನ್ನು ತಿನ್ನತೊಡಗಿ ಕಾಯಿಗಳು ಅಥವಾ ಹಣ್ಣುಗಳು ಕೊಳೆಯಲಾರ​೦ಭಿಸುತ್ತವೆ. ಇದು ಕಾಯಿಗಳು ಬಲಿಯುವ ಮೊದಲೇ ಉದುರುವಿಕೆಗೆ ಕಾರಣವಾಗುತ್ತವೆ. ಕೆಲವೊಮ್ಮೆ ಈ ಕೀಟದ ಭಾದೆ ಹಣ್ಣು ಕಟಾವಿನ ನ೦ತರವೂ ಕಾಣಿಸಿಕೊಳ್ಳಬಹುದು.

             ರಸಹೀರುವ ಕೀಟಗಳು ಗಿಡದ ಚಿಗುರಿನ ಮತ್ತು ಹೂವಿನ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಲುತ್ತವೆ. ಇವುಗಳು ಗಿಡದ ಭಾಗದಿ೦ದ ರಸಹೀರಿ ಆ ಭಾಗಗಳು ಮುದುಡಿ ಒಣಗುವ​೦ತೆ ಮಾಡುತ್ತವೆ. ಇವುಗಳು ಸಿಹಿಯಾದ ದ್ರವ ಪದಾರ್ಥ ವನ್ನು ಸ್ರವಿಸುವುದರಿ೦ದ ಇರುವೆಗಳನ್ನು ಆಕರ್ಷಿಸುತ್ತವೆ. 

ಡ್ರ್ಯಾಗನ್ ಹಣ್ಣಿನ ಕಟಾವು:

      ಡ್ರ್ಯಾಗನ್ ಹಣ್ಣಿನ ಗಿಡ ನೆಟ್ಟ ಹನ್ನೆರಡು ರಿ೦ದ ಹದಿನೈದು ತಿ೦ಗಳಿಗೆಲ್ಲ ಫಸಲು ನೀಡಲು ಪ್ರಾರ​೦ಭಿಸುತ್ತವೆ. ಫಲಬಿಡುವಿಕೆ ಎಪ್ರಿಲ್ ತಿ೦ಗಳಿನಿ೦ದ ಅಕ್ಟೊಬರ್ ನ ವರೆಗೆ ಸಾಗುತ್ತದೆ. ಕಾಯಿ ಹಣ್ಣಾದ ಒ೦ದು ವಾರದ ಒಳಗೆ ಕಟಾವು ಮಾಡಬೇಕಾಗಉತ್ತದೆ. ಮೂರು ವರ್ಷದ ಗಿಡಗಳು 30 ರಿ೦ದ 35 ಕೆ.ಜಿ ಯಷ್ಟು ಫಸಲನ್ನು ನೀಡುತ್ತವೆ ಎ೦ದು ಅ೦ದಾಜಿಸಲಾಗಿದೆ. ಗಿಡಗಳು ಹಳೆಯದಾದ​೦ತೆ ಇಳುವರಿಯೂ ಹೆಚ್ಚುತ್ತಾ ಸಾಗುತ್ತದೆ.

ಹೀಗೆ, ವಿಟಮಿನ್ ಗಳು, ಖನಿಜಾ೦ಶ ಮತ್ತು ನಾರಿನ ಅ೦ಶದಿ೦ದ ಕೂಡಿದ ಡ್ರ್ಯಾಗನ್ ಹಣ್ಣು ಆರೋಗ್ಯಕ್ಕೆ ಹೇಗೆ ಉತ್ತಮವೋ, ಹಾಗೆಯೇ ಹಣ್ಣನ್ನು ಬೆಳೆದವನಿಗೆ ಕೂಡ ಹೆಚ್ಚಿನ ಆದಾಯವನ್ನು ನೀಡುತ್ತವೆ. ಆರ​೦ಭದ ದಿನಗಳಲ್ಲಿ ಹೆಚ್ಚಿನ ಖರ್ಚು ಮತ್ತು ಪರಿಶ್ರಮ ಎನಿಸುವ ಈ ವ್ಯವಸಾಯದಲ್ಲಿ ಫಸಲಿಗಾಗಿ ಹೆಚ್ಚು ವರ್ಷ ಕಾಯುವ ಅಗತ್ಯವಿರುವುದಿಲ್ಲ​. ಗಿಡಗಳು ದೊಡ್ಡದಾದ೦ತೆಲ್ಲ ಇಳುವರಿಯೂ ಹೆಚ್ಚುತ್ತದೆ. ತೋಟಗಳನ್ನು ಸರಿಯಾದ ರೀತಿಯಲ್ಲಿ ನಿರ್ವಸಿದರೆ ಸುಮಾರು 15 ರಿ೦ದ 20 ವರ್ಷಗಳ ಕಾಲ ಇಳುವರಿ ಬರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ​. ಹಣ್ಣಿಗೆ ಇರುವ ಬೇಡಿಕೆಯೂ ಹೆಚ್ಚುತ್ತಿರುವುದು ಒ೦ದು ಆಶಾದಾಯಕ ಅ೦ಶ​.